ನವದೆಹಲಿ: ಗ್ರಾಹಕರು ಕಸ್ಟಮರ್ ಕೇರ್ಗೆ ಕರೆ ಮಾಡಿದಾಗ ಅವರ ಕಾಲ್ಗಳನ್ನು ಹೋಲ್ಡ್ ಮಾಡುವುದರಿಂದ ಕಳೆದ ವರ್ಷ ಭಾರತೀಯರು 15 ಶತಕೋಟಿ ಗಂಟೆಗಳಷ್ಟು ಭಾರಿ ಸಮಯದ ನಷ್ಟ ಅನುಭವಿಸಿದ್ದಾರೆ ಹಾಗೂ ಇದರ ಪರಿಣಾಮವಾಗಿ 55 ಶತಕೋಟಿ ಡಾಲರ್ ಆರ್ಥಿಕ ನಷ್ಟವಾಗಿದೆ ಎಂದು ವರದಿಯೊಂದು ಬುಧವಾರ ಬಹಿರಂಗಪಡಿಸಿದೆ.
ಎಐ ಪ್ಲಾಟ್ ಫಾರ್ಮ್ ಸರ್ವಿಸ್ ನೌ (ServiceNow) ನ ಹೊಸ ಸಂಶೋಧನೆಯ ಪ್ರಕಾರ, ವ್ಯಕ್ತಿಯೊಬ್ಬ ತನ್ನ ಸಮಸ್ಯೆಯ ಪರಿಹಾರಕ್ಕಾಗಿ ಪ್ರತಿ ವರ್ಷ ಸರಾಸರಿ ಒಂದು ದಿನಕ್ಕಿಂತ ಹೆಚ್ಚು ಅಥವಾ 30.7 ಗಂಟೆಗಳಷ್ಟು ಸಮಯವನ್ನು ವ್ಯಯಿಸುತ್ತಾನೆ. ಈ ನಿಧಾನಗತಿಯ ಕೆಲಸದಿಂದಾಗಿ ಸರಾಸರಿ ಉದ್ಯೋಗಿಯು ಪ್ರತಿ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು 3.9 ದಿನಗಳನ್ನು ಕಳೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ನಿಧಾನಗತಿಯ ಕಸ್ಟಮರ್ ಕೇರ್ ಸೇವೆಗಳಿಂದಾಗಿ 2024ರಲ್ಲಿ ಭಾರತೀಯ ವ್ಯವಹಾರಗಳು ತಮ್ಮ ಒಟ್ಟಾರೆ ಗ್ರಾಹಕರ ಪೈಕಿ ಮೂರನೇ ಎರಡರಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಸರ್ವಿಸ್ ನೌ ಇಂಡಿಯಾ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ನ ಎಸ್ವಿಪಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮೀತ್ ಮಾಥುರ್ ಹೇಳಿದ್ದಾರೆ.
ಅದರಲ್ಲೂ ಸಂಕೀರ್ಣ ಸಮಸ್ಯೆಗಳು ಕಾಯುವ ಸಮಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಅಸಮರ್ಥ ಆಂತರಿಕ ಸಂವಹನವು ಕಸ್ಟಮರ್ ಕೇರ್ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ ಎಂದು 48 ಪ್ರತಿಶತದಷ್ಟು ಭಾರತೀಯರು ಹೇಳಿದ್ದರೆ, ಕಸ್ಟಮರ್ ಕೇರ್ ಸಿಬ್ಬಂದಿಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಕೊರತೆಯಿಂದ ವಿಳಂಬವಾಗುತ್ತಿದೆ ಎಂದು 47 ಪ್ರತಿಶತದಷ್ಟು ಜನ ಹೇಳಿದ್ದಾರೆ. ಮೂರು ಕೆಲಸದ ದಿನಗಳಲ್ಲಿ ತಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ ಮತ್ತೊಂದು ಕಂಪನಿಗೆ ಬದಲಾವಣೆಯಾಗುವ ಬಗ್ಗೆ ಯೋಚಿಸುವುದಾಗಿ ಸುಮಾರು 66 ಪ್ರತಿಶತದಷ್ಟು ಜನರು ಹೇಳಿದ್ದಾರೆ.
ಚಾಟ್ ಬಾಟ್ಗಳು (55 ಪ್ರತಿಶತ) ಮತ್ತು ಸ್ವಸಹಾಯ ಮಾರ್ಗದರ್ಶಿಗಳ (56 ಪ್ರತಿಶತ) ಮೇಲೆ ತಮ್ಮ ನಂಬಿಕೆ ಹೆಚ್ಚಾಗಿದೆ ಎಂದು ಅರ್ಧಕ್ಕಿಂತ ಹೆಚ್ಚು ಭಾರತೀಯರು ಹೇಳಿದ್ದಾರೆ. ಭಾರತೀಯರಲ್ಲಿ ಎಐ ಬಗೆಗಿನ ನಂಬಿಕೆಯು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಅಧ್ಯಯನವು ತೋರಿಸಿದೆ. ಜೆನ್ ಎಐ ಕಸ್ಟಮರ್ ಕೇರ್ನಿಂದ ಉತ್ತಮ ಸೇವೆ ದೊರಕುತ್ತದೆ ಎಂದು ಮೂರನೇ ಎರಡರಷ್ಟು (66 ಪ್ರತಿಶತ) ಗ್ರಾಹಕರು ಅಭಿಪ್ರಾಯ ಪಟ್ಟಿದ್ದಾರೆ.
ಕಸ್ಟಮರ್ ಕೇರ್ ಸೇವೆಗಳು ಮತ್ತಷ್ಟು ವೇಗವಾಗಿ ಕೆಲಸ ಮಾಡಬೇಕೆಂದು ಶೇಕಡಾ 60 ರಷ್ಟು ಭಾರತೀಯರು ಬಯಸಿದರೆ, ಕಸ್ಟಮರ್ ಕೇರ್ನಲ್ಲಿ ಕಾಲ್ ಹೋಲ್ಡ್ ಮಾಡುವ ಅವಧಿಯನ್ನು ಕಡಿಮೆ ಮಾಡಬೇಕೆಂದು ಇನ್ನುಳಿದ ಗ್ರಾಹಕರು ಬಯಸಿದ್ದಾರೆ.
ಇದನ್ನೂ ಓದಿ : ಫಿನ್ಟೆಕ್ ಎನ್ಬಿಎಫ್ಸಿಗಳಿಂದ 98 ಸಾವಿರ ಕೋಟಿ ಮೊತ್ತದ 9 ಕೋಟಿ ಸಾಲ ಬಟವಾಡೆ: ವರದಿ - Indian Fintech NBFC