ಬೆಂಗಳೂರು : ''ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೂ ಕಾನೂನು ಚೌಕಟ್ಟಿನಲ್ಲಿ ತೀರ್ಪು ಕೊಡುತ್ತಾರೆ. ನಾವೂ ನಮ್ಮ ತನಿಖೆಯನ್ನು ಅದೇ ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ'' ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಿ.ವಿ.ರವಿ ಪ್ರಕರಣದಲ್ಲಿ ಬಸವರಾಜ ಹೊರಟ್ಟಿಯವರ ಪತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಹೊರಟ್ಟಿಯವರ ಪತ್ರದಲ್ಲಿ ಏನಿದೆ ಅಂತ ನೋಡುತ್ತೇನೆ. ಅದಾದ ನಂತರ ಕಾನೂನು ಸಲಹೆ ಪಡೆಯುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡುತ್ತೇವೆ. ಕಾನೂನು ಯಾರಿಗೂ ಹೊರತಾಗಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ದೂರಿನ ಮೇರೆಗೆ ಪೊಲೀಸರು ನಡೆದುಕೊಂಡರು. ಇದೆಲ್ಲ ಪರಿಶೀಲಿಸುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಶಾಸಕಾಂಗದ ಸಾರ್ವಭೌಮತ್ವ ಉಲ್ಲಂಘನೆ ಆಗಿದೆಯಾ ಅಂತ ಪರಿಶೀಲಿಸುತ್ತೇವೆ. ಅನಾವಶ್ಯಕ ಗೊಂದಲ ಆಗ್ತಿದ್ದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪತ್ತೆ ಹಚ್ಚಲು ಸಿಐಡಿಗೆ ಪ್ರಕರಣ ಕೊಟ್ಟೆವು. ಇದರಿಂದ ಸಾಂವಿಧಾನಿಕ ಸಂಘರ್ಷ ಏನೂ ಆಗಲ್ಲ'' ಎಂದು ಹೇಳಿದರು.
ಸಿ.ಟಿ.ರವಿಗೆ ಅನಾಮಿಕರಿಂದ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ನಾನೂ ಮಾಧ್ಯಮಗಳಲ್ಲಿ ನೋಡಿದೆ. ಅವರಿಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಪರಿಶೀಲಿಸುತ್ತೇವೆ. ಈಗಾಗಲೇ ಸಿಐಡಿಯವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪತ್ರದ ವಿಚಾರವನ್ನೂ ಪರಿಶೀಲಿಸುತ್ತಾರೆ. ಪತ್ರ ಯಾರು ಬರೆದರು ಅಂತ ಗೊತ್ತಿಲ್ಲವಲ್ಲ. ಯಾರು ಬರೆದಿದ್ದು ಅಂತ ತನಿಖೆಯಿಂದ ಗೊತ್ತಾಗುತ್ತದೆ'' ಎಂದರು.
ಪಕ್ಷದ ಚೌಕಟ್ಟಿನಲ್ಲಿ ಹೋಗುವುದು ನಮ್ಮೆಲ್ಲರ ಕರ್ತವ್ಯ: ಪಕ್ಷ ಉಂಟು, ನಾನುಂಟು ಎಂಬ ಡಿಕೆಶಿಯವರ ವೈರಾಗ್ಯದ ಮಾತುಗಳ ವಿಚಾರವಾಗಿ , ''ಒಳ್ಳೆಯ ತೀರ್ಮಾನ ಅದು. ಯಾಕೆಂದರೆ ಪಕ್ಷ ಅಂತಿಮವಾಗಿ ಏನು ತೀರ್ಮಾನ ಮಾಡುತ್ತೋ, ನಾವೆಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಹಾಗಾಗಿ, ನಾವೆಲ್ಲ ಅಂತಿಮವಾಗಿ ಹೈಕಮಾಂಡ್ ಅಂತನೇ ಹೇಳುವುದು. ಪಕ್ಷದ ತೀರ್ಮಾನ ಏನಾಗುತ್ತೋ ಅಂತಿಮವಾಗಿ ಅದೇ ಆಗುವುದು. ನಿನ್ನೆ ಕೂಡ ನಾನು ಅದನ್ನೇ ಹೇಳಿದ್ದೆ. ಪಕ್ಷ ಏನು ಹೇಳುತ್ತೋ ನಾವೆಲ್ಲಾ ಅಂತಿಮವಾಗಿ ಅದನ್ನೇ ಒಪ್ಪಿಕೊಳ್ಳುತೇವೆ ಅಂದಿದ್ದೆ. ಶಿವಕುಮಾರ್ ಸಹ ಅದೇ ಮಾತನಾಡಿದ್ದಾರೆ, ಬಹಳ ಸಂತೋಷ. ಪಕ್ಷದ ಚೌಕಟ್ಟಿನಲ್ಲಿ ಹೋಗುವುದು ನಮ್ಮೆಲ್ಲರ ಕರ್ತವ್ಯ, ಅದನ್ನು ನಾವು ಮಾಡುತ್ತೇವೆ'' ಎಂದು ಪ್ರತಿಕ್ರಿಯಿಸಿದರು.
ನಕ್ಸಲರ ಶರಣಾಗತಿ ಬಗ್ಗೆ ಪ್ರತಿಕ್ರಿಯಿಸುತ್ತಾ, ''ಅವರ ಹೋರಾಟಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಸಂವಿಧಾನ ಹೇಳಿದ ದಾರಿಯಲ್ಲಿ ಹೋರಾಟ ಮಾಡಲಿ. ಆದರೆ ಶಸ್ತ್ರಗಳ ಬಳಕೆ ಮಾಡುವ ಮಾರ್ಗ ಬೇಡ. ಶಸ್ತ್ರಗಳ ದಾರಿ ಹಿಡಿಯಲ್ಲ ಅಂತ ನಕ್ಸಲರು ಹೇಳಿದ್ದಾರೆ. ಮೂರು ವರ್ಷ ಸರ್ಕಾರ ಇರುತ್ತಲ್ಲ, ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಆಗುತ್ತದೆ'' ಎಂದರು.
ಇದನ್ನೂ ಓದಿ : ಸಿ ಟಿ ರವಿ ಕೇಸ್ ರೂಲಿಂಗ್ ಬಳಿಕವೂ ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಆಕ್ಷೇಪ; ಗೃಹ ಸಚಿವರಿಗೆ ಹೊರಟ್ಟಿ ಪತ್ರ - CT RAVI CASE