ಬೆಂಗಳೂರು : ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಶನಿವಾರ ನಗರದಲ್ಲಿ ವರದಿಯಾಗಿವೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಲ್ಲಿಕಾರ್ಜುನ (25) ಹಾಗೂ ಮತ್ತೊಂದೆಡೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ. ಶಿವಕುಮಾರ್ ಗುಣಾರೆ ಮಾತನಾಡಿ, ''ವಿಜಯನಗರ ಮೂಲದ ಮಲ್ಲಿಕಾರ್ಜುನ ಖಾಸಗಿ ಆಸ್ಪತ್ರೆಯೊಂದಲ್ಲಿ ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ. ನಾಲ್ಕು ವರ್ಷಗಳಿಂದ ಆನ್‌ಲೈನ್ ಗೇಮ್ಸ್ ಆಡುವ ಹವ್ಯಾಸ ಹೊಂದಿದ್ದ ಮಲ್ಲಿಕಾರ್ಜುನ, ಸಾಕಷ್ಟು ಹಣವನ್ನ ಗೇಮಿಂಗ್ ಆ್ಯಪ್‌ನಲ್ಲಿ ಕಳೆದುಕೊಂಡಿದ್ದ. ಕೊನೆಗೆ ಆರ್ಥಿಕ ಸಂಕಷ್ಟ ತಾಳಲಾರದೆ ಶನಿವಾರ ತನ್ನ ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ' ಎಂದು ತಿಳಿಸಿದರು.
ಆನ್‌ಲೈನ್ ಗೇಮ್ ಗೀಳಿಗೆ ಆಟೋ ಚಾಲಕ ಬಲಿ: ಆನ್‌ಲೈನ್‌ನಲ್ಲಿ ಗೇಮ್ಸ್‌ನಲ್ಲಿ ಹಣ ಹೂಡಿ ಆರ್ಥಿಕ ಸಂಕಷ್ಟ ತಾಳಲಾರದೆ ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದ ಬಳ್ಳಾರಿ ಮೂಲದ ವ್ಯಕ್ತಿ, ಕುಟುಂಬಸ್ಥರು ಮನೆಯಲ್ಲಿ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಬೆಳ್ಳಂದೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಪ್ರೀತಿಸಿದವನ ಆತ್ಮಹತ್ಯೆಯಿಂದ ಮನನೊಂದು ವಿವಾಹಿತ ಮಹಿಳೆ ಸಾವಿಗೆ ಶರಣು - A MARRIED WOMAN DIED