ಅಂಗಡಿಯಲ್ಲಿ ಚಿಲ್ಲರೆ ಹಣ ಕದ್ದಿದ್ದಾನೆಂದು ಬಾಲಕನಿಗೆ ಚಿತ್ರಹಿಂಸೆ: ಕೊಲೆ ಆರೋಪ - ಅಂಗಡಿಯಲ್ಲಿ ಚಿಲ್ಲರೆ ಹಣ ಕದ್ದಿದ್ದಾನೆಂದು ಬಾಲಕನಿಗೆ ಚಿತ್ರಹಿಂಸೆ ಬಾಲಕ ಸಾವು
🎬 Watch Now: Feature Video
ಹಾವೇರಿ: 10 ವರ್ಷದ ಬಾಲಕನೋರ್ವ ದಿನಸಿ ಅಂಗಡಿಯಲ್ಲಿ ಹಣ ಕಳ್ಳತನ ಮಾಡಿದ್ದನೆಂಬ ಕಾರಣಕ್ಕೆ ಅಂಗಡಿ ಮಾಲೀಕ ಆತನನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ಇಂಥದೊಂದು ಅಮಾನವೀಯ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಮಾರ್ಚ್ 16 ರಂದು ಪ್ರವೀಣ ಕರಿಶೆಟ್ಟರ ಎಂಬುವರ ಮಾಲೀಕತ್ವದ ದಿನಸಿ ಅಂಗಡಿಗೆ ಹೋಗಿದ್ದ ಬಾಲಕ ಹರೀಶಯ್ಯ ಹಣ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕನ್ನು ಹಿಡಿದ ಅಂಗಡಿ ಮಾಲೀಕ ಪ್ರವೀಣ ತನ್ನ ಮನೆಯ ಹಿತ್ತಲಿನಲ್ಲಿ ಬಾಲಕನ ಕಿವಿ ಹಿಡಿಸಿ, ಬೆನ್ನಿನ ಮೇಲೆ ಭಾರವಾದ ಕಲ್ಲನ್ನಿಟ್ಟು ಗುಂಡಿಯಲ್ಲಿ ಹೂತು ಹಾಕಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಹರೀಶಯ್ಯನನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿತ್ತು. ಆದರೆ ಹರೀಶಯ್ಯ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ರಾತ್ರಿ ಅಸುನೀಗಿದ್ದಾನೆ. ಈತನ ಸಾವಿಗೆ ಕರಿಶೆಟ್ಟರ್ ಅಂಗಡಿಯವರು ನೀಡಿದ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಪ್ರವೀಣ ಕರಿಶೆಟ್ಟರ, ಬಸವಣ್ಣೆವ್ವ ಕರಿಶೆಟ್ಟರ, ಶಿವರುದ್ರಪ್ಪ ಹಾವೇರಿ, ಕುಮಾರ ಹಾವೇರಿ ಎಂಬುವರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.