ವಿಶ್ವಕಪ್ ಫೈನಲ್: ಉಡಿ ತುಂಬಿ, ಆರತಿ ಬೆಳಗಿ ಭಾರತ ತಂಡಕ್ಕೆ ಶುಭ ಹಾರೈಸಿದ ಬೆಳಗಾವಿ ಮಹಿಳೆಯರು - ಈಟಿವಿ ಭಾರತ ಕನ್ನಡ
🎬 Watch Now: Feature Video


Published : Nov 19, 2023, 3:59 PM IST
|Updated : Nov 19, 2023, 5:29 PM IST
ಬೆಳಗಾವಿ: ಏಕದಿನ ವಿಶ್ವಕಪ್ ಫೈನಲ್ ಶುರುವಾಗಿದೆ. ಟೀಂ ಇಂಡಿಯಾ ಗೆಲುವಿಗೆ ದೇಶಾದ್ಯಂತ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಲಿ ಎಂದು ಬೆಳಗಾವಿಯ ಮಹಿಳಾ ಕ್ರೀಡಾಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಣಿ ಚೆನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರಿಗೆ ಉಡಿ ತುಂಬಿ, ಆರತಿ ಬೆಳಗಿ ಭಾರತ ತಂಡಕ್ಕೆ ಶುಭ ಹಾರೈಸಲಾಯಿತು. ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಭಾರತ ತಂಡದ ಆಟಗಾರರ ಭಾವಚಿತ್ರಗಳನ್ನು ಹಿಡಿದು 20ಕ್ಕೂ ಮಹಿಳಾ ಅಭಿಮಾನಿಗಳು ಸಂಭ್ರಮಿಸಿದರು.
ಈ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಕ್ರೀಡಾಭಿಮಾನಿ ಆಯಿಷಾ ಸನದಿ, "ನಮ್ಮ ಭಾರತ ಫೈನಲ್ನಲ್ಲಿ ಗೆಲ್ಲುವಂತೆ ನಾವೆಲ್ಲಾ ಮಹಿಳೆಯರು ಉಡಿ ತುಂಬಿ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಗೆದ್ದ ಬಳಿಕ ಮಂಡಿಯೂರಿ 11 ಸುತ್ತು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತೇವೆ" ಎಂದರು.
ಬಳಿಕ ಮತ್ತೋರ್ವ ಕ್ರಿಕೆಟ್ ಅಭಿಮಾನಿ ಸವಿತಾ ಸಾತ್ಪುತೆ ಮಾತನಾಡಿ, "ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಗೆಲ್ಲಿಸುವ ವಿಶ್ವಾಸ ನಮಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನು, ಬೆಳಗಾವಿಯ ಬಾಲಕಿಯರು ಟೀಂ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದ್ದು, ಚೆಕ್ ದೇ ಇಂಡಿಯಾ ಎಂದು ಘೋಷಣೆ ಕೂಗಿ ಶುಭ ಹಾರೈಸಿದ್ದಾರೆ. ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಖುಷಿ, ಪೂಜಾ, ಪದ್ಮಾ 'ನಮ್ಮ ಭಾರತ ಗೆದ್ದೇ ಗೆಲ್ಲುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಣಪನಿಗೆ 101 ತೆಂಗಿನಕಾಯಿ: ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದು ಬರಲೆಂದು ನಮ್ಮ ಕರ್ನಾಟಕ ಸೇನಾ ಪಡೆ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಇಂದು ಬೆಳಗ್ಗೆ ಮೈಸೂರಿನ 101 ಗಣಪತಿ ದೇವಸ್ಥಾನದಲ್ಲಿ, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿಗಳನ್ನು ಈಡುಗಾಯಿ ಒಡೆಯಲಾಯಿತು.
ಇದನ್ನೂ ಓದಿ: ವಿಶ್ವಕಪ್ ಫೈನಲ್: ಭಾರತದ ಗೆಲುವಿಗೆ ಕ್ರಿಕೆಟ್ ಅಭಿಮಾನಿಗಳಿಂದ ದೇವಾಲಯಗಳಲ್ಲಿ ಪೂಜೆ