ಮುಷ್ಕರಕ್ಕೆ ಉತ್ತರ ಕನ್ನಡದಲ್ಲಿಯೂ ವ್ಯಾಪಕ ಬೆಂಬಲ: ಮೈದಾನಕ್ಕಿಳಿದ ಮಕ್ಕಳು
ಕಾರವಾರ (ಉತ್ತರ ಕನ್ನಡ) : ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಕರೆ ಕೊಟ್ಟಿರುವ ಮುಷ್ಕರಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಹಾಗೂ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಪ್ರತಿಭಟನೆಗೆ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರು, ವೈದ್ಯರು, ನರ್ಸ್ ಸೇರಿದಂತೆ ಇತರೆ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ.
ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಶಿರಸಿಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳು ಆಟದ ಮೈದಾನಕ್ಕಿಳಿದು ಆಟವಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಇನ್ನು ಶಾಲೆಗಳಿಗೆ ರಜೆ ಘೋಷಣೆ ಮಾಹಿತಿ ಸಿಗದೆ ಮುಷ್ಕರದ ಬಗ್ಗೆಯೂ ಅರಿಯದ ಕೆಲ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿ ಶಾಲೆಗಳು ಬಂದ್ ಆಗಿರುವುದನ್ನು ತಿಳಿದು ವಾಪಸ್ ಮನೆಗೆ ತೆರಳಿದ್ದಾರೆ.
ಇನ್ನು, ಕಾರವಾರದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಒಪಿಡಿ ಸೇವೆ ಬಂದ್ ಆಗಿದೆ. ಎಲ್ಲೆಡೆಯೂ ಇದೇ ಪರಿಸ್ಥಿತಿ ಇದ್ದು ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಜಿಲ್ಲೆಯಲ್ಲಿ ಸುಮಾರು 19 ಸಾವಿರ ಸರ್ಕಾರಿ ನೌಕರರು ಇದ್ದು ಪೊಲೀಸ್, ಅಗ್ನಿಶಾಮಕ, ಜೈಲು ಸಿಬ್ಬಂದಿ ಮಾತ್ರ ಮುಷ್ಕರದಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ :ಸರ್ಕಾರಿ ನೌಕರರ ಪ್ರತಿಭಟನೆ: ಸಂಜೆ ಆಯೋಗ, ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಇತ್ಯರ್ಥ- ಸಿಎಂ