ವಿದ್ಯುತ್ ತಗುಲಿ ಮೃತಪಟ್ಟ ಮಂಗನ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು - ಈಟಿವಿ ಭಾರತ ಕನ್ನಡ
🎬 Watch Now: Feature Video

ವಿಜಯಪುರ : ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ಮಂಗನ ಅಂತ್ಯಕ್ರಿಯೆಯನ್ನು ಊರಿನ ಜನರು ಸೇರಿ ಅದ್ಧೂರಿಯಾಗಿ ನಡೆಸಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಣಕಾಲ ಎಂಬ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ವಿದ್ಯುತ್ ಶಾಕ್ ತಗುಲಿ ಮಂಗವೊಂದು ಸಾವನ್ನಪ್ಪಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಮಂಗನ ಅಂತ್ಯಕ್ರಿಯೆ ನಡೆಸಲು ತೀರ್ಮಾನಿದ್ದಾರೆ. ಬಳಿಕ ಮಂಗನ ಮೃತದೇಹವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ವೇಳೆ ಗ್ರಾಮಸ್ಥರು ಆಂಜನೇಯನ ಹಾಡುಗಳನ್ನು ಹಾಕಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಮಂಗನ ಮೃತದೇಹವನ್ನು ಗ್ರಾಮದ ನಡುವೆ ಇಟ್ಟು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಭಜನೆ, ಸಂಗೀತ, ಭಕ್ತಿ ಗೀತೆಗಳನ್ನು ಹಾಡಿ ಮಂಗನ ಸಾವಿಗೆ ಕಂಬನಿ ಮಿಡಿದರು.
ಬಳಿಕ ಶನಿವಾರದಂದು ಗ್ರಾಮಸ್ಥರೆಲ್ಲ ಸೇರಿ ಮಂಗದ ಮೃತದೇಹಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು. ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಕಣಕಾಲ ಗ್ರಾಮದ ಪುನೀತರಾಜಕುಮಾರ್ ಸರ್ಕಲ್ ಬಳಿ ಮಂಗದ ಅಂತ್ಯಕ್ರಿಯೆ ನಡೆಸಲಾಗಿದ್ದು, ಇಲ್ಲಿಯೇ ಆಂಜನೇಯ ಮೂರ್ತಿ ಸ್ಥಾಪಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಈ ಕಾರ್ಯಕ್ಕೆ ಎಲ್ಲ ಸಹಕಾರ ನೀಡಲಾಗುವುದು ಎಂದು ಪಂಚಾಯತ್ ಸದಸ್ಯ ರಾಜಶೇಖರ್ ಹೇಳಿದರು.
ಇದನ್ನೂ ಓದಿ : ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಮಂಗನ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು..!