ಹುಣಸೆ ಮರ ಮರಳಿ ನೆಡುತ್ತಿದ್ದಂತೆ ಮುಗಿಲು ಮುಟ್ಟಿದ ಜನರ ಹರ್ಷೋದ್ಘಾರ .. ಕೃಷಿ ವಿವಿ, ಅರಣ್ಯಾಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ - ಸಾವಿರಾರು ವರ್ಷಗಳ ಇತಿಹಾಸವಿರುವ ದೊಡ್ಡ ಹುಣಸೆ ಮರ
🎬 Watch Now: Feature Video
ಹಾವೇರಿ: ಆರು ದಿನದ ಹಿಂದೆ ಮಳೆಗಾಳಿಗೆ ಬಿದ್ದಿದ್ದ ಹಾವೇರಿ ಜಿಲ್ಲೆ ಸವಣೂರಿನ ದೊಡ್ಡಹುಣಸಿಮರವನ್ನು ಗುರುವಾರ ಮರಳಿ ನೆಡಲಾಯಿತು. ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಿಂದ ಆಗಮಿಸಿದ ವಿಜ್ಞಾನಿಗಳು, ಅರಣ್ಯಾಧಿಕಾರಿಗಳು ದೊಡ್ಡ ಹುಣಸಿ ಮರ ಮರು ನೆಡುವ ಕಾರ್ಯಾಚರಣೆ ಕುರಿತಾಗಿ ಮೊದಲು ಚರ್ಚೆ ನಡೆಸಿದರು.
ದೊಡ್ಡ ಹುಣಸಿಮರವನ್ನು ಮತ್ತೆ ಮರಳಿ ಹಿಂದೆ ಇದ್ದ ಜಾಗದಲ್ಲಿ ನೆಡುವ ಕಾರ್ಯಾಚರಣೆ ಇಂದು ಅಧಿಕಾರಿಗಳ ನೇತೃತ್ವಲ್ಲಿ ಜರುಗಿತು. ಬೃಹತ್ ಕ್ರೇನ್ ಇಟಾಚಿ ಮತ್ತು ಜೆಸಿಬಿಗಳಿಂದ ಬಿದ್ದಿದ್ದ ಮರ ಮೇಲಕ್ಕೆ ಎತ್ತಿ ನಿಲ್ಲಿಸಲಾಯಿತು. ನಂತರ ಮರದ ಬುಡಕ್ಕೆ ಟ್ರೀಟಮೆಂಟ್ ಮಾಡಿ ಮರ ಮರಳಿ ನೆಡಲಾಯಿತು. ಮರ ಮರು ನೆಡುವ ಕಾರ್ಯವನ್ನು ದೊಡ್ಡಹುಣಸಿಮರದ ಕಲ್ಮಠದ ಶ್ರೀಗಳು ಸೇರಿದಂತೆ ಹಲವು ಶ್ರೀಗಳು ಮತ್ತು ಸಾವಿರಾರು ಭಕ್ತರು ವೀಕ್ಷಣೆ ಮಾಡಿದರು. ಮರ ಮೊದಲು ಇದ್ದ ಜಾಗದಲ್ಲಿ ನೆಡುತ್ತಿದ್ದಂತೆ ಸಾರ್ವಜನಿಕರ ಸಂಭ್ರಮ ಮುಗಿಲು ಮುಟ್ಟಿತು.
ಅಫ್ರಿಕಾ ಮೂಲದ ದೊಡ್ಡ ಹುಣಿಸಿಮರ: ಸಾವಿರಾರು ವರ್ಷಗಳ ಇತಿಹಾಸ ಇರುವ ಹಾವೇರಿ ಜಿಲ್ಲೆ ಸವಣೂರಿನಲ್ಲಿ ಆಫ್ರಿಕಾ ಮೂಲದ ಮೂರು ಆನೆಹುಣಸಿಮರಗಳನ್ನು ನೆಡಲಾಗಿತ್ತು. ಈ ಮೂರು ಮರಗಳಲ್ಲಿ ಒಂದು ಮರ ಜುಲೈ 7 ರಂದು ಭಾರಿ ಮಳೆಗಾಳಿಗೆ ಉರುಳಿ ಬಿದ್ದಿತು. ಬೇರನ್ನು ಗೆದ್ದಲು ತಿಂದಿದ್ದರಿಂದ ದೊಡ್ಡ ಹುಣಸೆ ಮರ ಉರುಳಿ ಬಿದ್ದಿತ್ತು. ಮರದಲ್ಲಿ ದೈವಿ ಸ್ವರೂಪ ಕಂಡಿದ್ದ ಭಕ್ತರು ಆತಂಕಕ್ಕೆ ಒಳಗಾಗಿದ್ದರು. ಮರವನ್ನು ಆಶ್ರಯಿಸಿದ್ದ ಬಾವಲಿಗಳು ಸೇರಿದಂತೆ ಹಲವಾರು ಪಕ್ಷಿಗಳು ತಮ್ಮ ಗೂಡು ಕಳೆದುಕೊಂಡಿದ್ದವು.
ಇದೀಗ ಅಫ್ರಿಕಾ ಮೂಲದ ದೊಡ್ಡ ಹುಣಸೆ ಮರವನ್ನು ಮರಳಿ ನೆಟ್ಟಿದ್ದು, ಭಕ್ತರಲ್ಲಿ ಸಂತಸ ಮೂಡಿದೆ. ಕೃಷಿ ವಿವಿ ವಿಜ್ಞಾನಿಗಳು ಮತ್ತು ಅರಣ್ಯಾಧಿಕಾರಿಗಳು ಮರ ಮರು ನೆಡಲು ಪ್ರಯತ್ನಿಸಿದ ಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಮರ ಎಂದಿನಂತೆ ಎದ್ದು ನಿಂತಿರುವುದನ್ನು ನೋಡಿ ಭಕ್ತರು ಹರ್ಷ ವ್ಯಕ್ತಪಡಿಸಿದರು.