ಜನರಿಗೆ ಗ್ಯಾರಂಟಿ ಕಾರ್ಡ್ ಮುಟ್ಟಿಸಲು ವಿಡಿಯೋ ಮೂಲಕ ಸಿದ್ದರಾಮಯ್ಯ, ಡಿಕೆಶಿ ಕರೆ - Siddaramaiah DK shivakumar video appeal
🎬 Watch Now: Feature Video
ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ಮುಟ್ಟಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಮಾಡಿರುವ ಮೂರು ಚುನಾವಣಾ ಭರವಸೆಗಳ ಗ್ಯಾರಂಟಿ ಕಾರ್ಡ್ ರಾಜ್ಯದ ಜನರಿಗೆ ತಲುಪಿಸುವ ಕಾರ್ಯ ಆರಂಭಿಸಿದ್ದು, ನಾಳೆಯಿಂದ ಪ್ರತಿ ಗ್ರಾಮಕ್ಕೂ ತಲುಪಿಸಲು ಮುಂದಾಗಿದೆ.
ಈ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆಗೂಡಿ ವಿಡಿಯೋ ಮೂಲಕ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಮನೆ ಯಜಮಾನಿಗೆ 2,000 ರೂ. ಸಹಾಯ ಧನ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವ ಭರವಸೆಯನ್ನು ಈಗಾಗಲೇ ಘೋಷಣೆ ಮಾಡಿದೆ. ಈ ಮೂರು ಭರವಸೆಗಳ ಗ್ಯಾರಂಟಿ ಕಾರ್ಡ್ ಅನ್ನು ರಾಜ್ಯದ ಪ್ರತಿ ಮನೆಗಳಿಗೆ ತಲುಪಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಮೊದಲ ಗ್ಯಾರಂಟಿ ಕಾರ್ಡ್ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ಪೂರೈಕೆ, 2ನೇ ಗ್ಯಾರಂಟಿ ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮೀ ಯೋಜನೆ ಜಾರಿ ಮತ್ತು 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವ ಭರವಸೆಯ ಕಾರ್ಡ್ ವಿತರಿಸಲಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯರ ಸಹಿ ಇರುವ ಗ್ಯಾರಂಟಿ ಕಾರ್ಡನ್ನು ಪಕ್ಷ ಜನರಿಗೆ ವಿತರಿಸುತ್ತಿದೆ. ಕನಿಷ್ಠ ದಿನಕ್ಕೆ 50 ಮನೆಗಳಿಗೆ ಭೇಟಿ ನೀಡಿ ಗ್ಯಾರಂಟಿ ಕಾರ್ಡ್ ನೀಡುವಂತೆ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಜಾಮೀನಿನ ಮೇಲಿದ್ದಾರೆ: ಜೆ.ಪಿ.ನಡ್ಡಾ