ಮಂಡ್ಯ: ಸರ್ಕಾರಿ ಭೂಮಿ ಅಕ್ರಮ ಪರಭಾರೆ ಖಂಡಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ - ಕಾರ್ಯಕರ್ತರ ಪ್ರತಿಭಟನೆ
🎬 Watch Now: Feature Video
Published : Jan 11, 2024, 6:08 PM IST
ಮಂಡ್ಯ: ಮಳವಳ್ಳಿ ತಾಲೂಕಿನಾದ್ಯಂತ ಸರ್ಕಾರಿ ಭೂಮಿ ಅಕ್ರಮ ಪರಭಾರೆ (ಖಾತೆ) ವಿರೋಧಿಸಿ ಮಳವಳ್ಳಿ ತಾಲೂಕು ಕಚೇರಿ ಮುಂದೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಇಂದು (ಗುರುವಾರ) ಬೃಹತ್ ಪ್ರತಿಭಟನೆ ನಡೆಸಿದರು.
''ಇತ್ತೀಚಿನ ದಿನಗಳಲ್ಲಿ ಮಳವಳ್ಳಿ ತಾಲೂಕಿನಾದ್ಯಂತ ವಿವಿಧ ಹೋಬಳಿಗಳ ಸರ್ವೆ ನಂಬರ್ಗಳಲ್ಲಿ ಸರ್ಕಾರಿ ಖರಾಬು, ಗೋಮಾಳ, ಬೀಳು, ಉಲ್ಬನಿ ಇತರೆ ಸರ್ಕಾರಿ ಒಡೆತನದಲ್ಲಿರುವ ಆಸ್ತಿಯನ್ನು ಕರ್ನಾಟಕ ಸರ್ಕಾರದ ಭೂ ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ತಾಲೂಕು ಆಡಳಿತ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ'' ಎಂದು ಮಾಜಿ ಶಾಸಕ ಕೆ ಅನ್ನದಾನಿ ಆರೋಪಿಸಿದರು.
''ಇಡೀ ತಾಲೂಕಿನಲ್ಲಿ ಭೂರಹಿತ ಕೃಷಿ ಕಾರ್ಮಿಕರು, ಅಲ್ಪ ಸ್ವಲ್ಪ ಜಮೀನು ಹೊಂದಿರುವ ಸಾವಿರಾರು ಬಡ ರೈತರು ಫಾರಂ ನಂಬರ್ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿ ಭೂಮಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಕ್ಯಾರೆ ಎನ್ನದೇ ತಾಲೂಕು ಆಡಳಿತ ಸುಮ್ಮನೆ ಕುಳಿತಿದೆ'' ಎಂದು ಅವರು ಕಿಡಿಕಾರಿದರು.
ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಜಯರಾಮು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ ರವಿ, ಹನುಮಂತು, ಮುಖಂಡರಾದ ಬಿ ಎಂ ಕಾಂತರಾಜು, ಪುರಸಭೆ ಸದಸ್ಯ ಟಿ ನಂದಕುಮಾರ್, ಆರ್ ಎನ್ ಸಿದ್ದರಾಜು ಪ್ರಶಾಂತ್ ನೂರುಲ್ಲಾ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಕೃಷ್ಣ, ಸಿದ್ದಚಾರಿ ಶ್ರೀಧರ್, ಜೆಡಿಎಸ್ ಕಾರ್ಯಧ್ಯಕ್ಷ ಕುಮಾರ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಸೋಲಿನ ಭೀತಿಯಿಂದ ರಾಮಮಂದಿರದ ಬಗ್ಗೆ ಕಾಂಗ್ರೆಸ್ ಆರೋಪ : ನಿಖಿಲ್ ಕುಮಾರಸ್ವಾಮಿ