ಅಂಬೇಡ್ಕರ್ ಜ್ಞಾನ ಮತ್ತು ಸಾಧನೆಯ ಪ್ರತೀಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್, ಪ್ರಧಾನಿಯಿಂದಲೂ ನಮನ - ರಾಷ್ಟ್ರಪತಿ ದ್ರೌಪದಿ ಮುರ್ಮು
🎬 Watch Now: Feature Video
ನವದೆಹಲಿ: ಇಂದು ಭಾರತದ ಸಂವಿಧಾನ ಪಿತಾಮಹ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 132 ನೇ ಜನ್ಮ ವಾರ್ಷಿಕೋತ್ಸವ ದಿನವಾಗಿದ್ದು, ಈ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯಗಳನ್ನು ಕೋರಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ದ್ರೌಪದಿ ಮುರ್ಮು ಅವರು, 'ನಮ್ಮ ಸಂವಿಧಾನದ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ನನ್ನೆಲ್ಲಾ ಸಹ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಜ್ಞಾನ ಮತ್ತು ಸಾಧಕತೆಯ ಪ್ರತೀಕವಾಗಿರುವ ಡಾ.ಅಂಬೇಡ್ಕರ್ ಅವರು ಶಿಕ್ಷಣ ತಜ್ಞ, ಕಾನೂನು ತಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿ ಪ್ರತಿಕೂಲ ಸಂದರ್ಭಗಳಲ್ಲಿಯೂ ದಣಿವರಿಯದೇ ದುಡಿದು ರಾಷ್ಟ್ರದ ಕಲ್ಯಾಣಕ್ಕಾಗಿ ಜ್ಞಾನವನ್ನು ಪಸರಿಸಿದವರು. ಅವರ ಮೂಲ ಮಂತ್ರ - ಶಿಕ್ಷಣ, ಸಂಘಟನೆ ಮತ್ತು ವಂಚಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೋರಾಡುವುದು. ಇದು ಇಂದಿಗೂ, ಯಾವಾಗಲೂ ಪ್ರಸ್ತುತವಾಗಿರುತ್ತದೆ. ಕಾನೂನಿನ ಆಳ್ವಿಕೆಯಲ್ಲಿ ಅಂಬೇಡ್ಕರ್ ಅವರ ಅಚಲ ನಂಬಿಕೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ನೀಡಿದ ಬದ್ಧತೆ ಭಾರತದ ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ.
ಹಾಗಾಗಿ ಈ ಸಂದರ್ಭದಲ್ಲಿ, ಡಾ. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಮತ್ತು ಸಮಾನತೆ ಮತ್ತು ಸಮೃದ್ಧ ರಾಷ್ಟ್ರ ಮತ್ತು ಸಮಾಜವನ್ನು ರಚಿಸುವಲ್ಲಿ ಮುಂದುವರಿಯುವ ಎಂದು ಅವರು ಬರೆದುಕೊಂಡಿದ್ದಾರೆ.
ಈ ನಡುವೆ ಪ್ರಧಾನಿ ಸಹ ಅಂಬೇಡ್ಕರ್ ಜಯಂತಿ ಶುಭಾಶಯ ತಿಳಿಸಿದ್ದು, ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಕೆ ಮಾಡಿದರು. ಉಳಿದಂತೆ ಬಿಎಸ್ಪಿ ನಾಯಕಿ ಮಾಯಾವತಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ನಾನಾ ಗಣ್ಯರು ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿ,ಅವರ ಕೊಡುಗೆಗಳನ್ನು ಸ್ಮರಿಸಿದರು.
ಇದನ್ನೂ ಓದಿ: ಅಂಬೇಡ್ಕರ್ ಜನ್ಮದಿನ.. ಹೈದರಾಬಾದ್‌ನಲ್ಲಿ 'ಸಂವಿಧಾನ ಶಿಲ್ಪಿ'ಯ 125 ಅಡಿ ಎತ್ತರದ ಪ್ರತಿಮೆ ಅನಾವರಣ