ತಾಕತ್ ಇದ್ದರೆ ಮೋದಿ ಹೆಸರು ಬಿಟ್ಟು ನಿಮ್ಮ ಅಭಿವೃದ್ಧಿ ಹೇಳಿ ಗೆದ್ದು ಬನ್ನಿ: ಮುತಾಲಿಕ್ - ಉತ್ತರ ಕನ್ನಡ
🎬 Watch Now: Feature Video
ಶಿರಸಿ(ಉತ್ತರ ಕನ್ನಡ): "ಈ ಬಾರಿಯೂ ಮೋದಿಗೆ ವೋಟ್ ಹಾಕಿ ಎಂದು ಬರುವವರಿಗೆ ಸರಿಯಾದ ಪಾಠ ಕಲಿಸಿ" ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಶಿರಸಿಯ ಸಹ್ಯಾದ್ರಿ ರಂಗಮಂದಿರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಏರ್ಪಡಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿರುವ ಅವರು, "ಆರೇಳು ಬಾರಿ ಗೆದ್ದವರು ಇಲ್ಲಿದ್ದಾರೆ. ಕರ್ನಾಟಕವನ್ನು ಲೂಟಿ ಮಾಡಿದವರಿದ್ದಾರೆ. ಮೊದಲು ಇದ್ದಾಗ ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ?, ಯಾರಿಗಾಗಿ ಗಳಿಸಿದ್ದೀರಿ?, ಜನಸಂಘ ಹುಟ್ಟಿದ್ದು ಯಾಕೆ ಎನ್ನುವುದು ನೆನಪಿದೆಯಾ?" ಎಂದು ಕಿಡಿಕಾರಿದರು.
"ಪ್ರಧಾನಿ ಮೋದಿಯವರು ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ಆಗ್ತಿರೋದು ಏನು?. ಸಾವಿರಾರು ವರ್ಷಗಳಿಂದ ಗೋಮಾತೆಯನ್ನು ಉಳಿಸಿ ಎಂದು ಋಷಿ ಮುನಿಗಳು ಹೇಳುತ್ತಿದ್ದಾರೆ. ಗ್ರಾಮದಿಂದ ಕೇಂದ್ರದವರೆಗೂ ನಮ್ಮದೇ ಸರ್ಕಾರವಿದ್ದರೂ ಒಂದು ಆಕಳು ಉಳಿಸಲು ಆಗುತ್ತಿಲ್ಲ. ಕಾನೂನಿದೆ, ಪೊಲೀಸರಿದ್ದಾರೆ, ಅಧಿಕಾರವಿದೆ. ಆದರೆ ಇಚ್ಛಾಶಕ್ತಿ ಇಲ್ಲ. ಆರೇಳು ಬಾರಿ ಸಂಸದರು, ಶಾಸಕರಾದವರು ಇದ್ದಾರೆ. ಆದರೆ ಅವರಿಗೆ ಆಕಳ ರೋಧನೆ ಕೇಳಿಸುತ್ತಿಲ್ಲ. ಅದರ ನೆತ್ತರ ಕಾಣುತ್ತಿಲ್ಲವೇ? ಅದರ ಶಾಪ ತಟ್ಟುತ್ತದೆ" ಎಂದರು.
"ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಪ್ರಧಾನಿ ಮೋದಿ ಹೆಸರು ಹೇಳಿ ಗೆದ್ದವರು ನೀವು. ತಾಕತ್ ಇದ್ದರೆ ಮೋದಿ ಹೆಸರು ಬಿಟ್ಟು ನಿಮ್ಮ ಅಭಿವೃದ್ಧಿ ಹೇಳಿ ಗೆದ್ದು ಬನ್ನಿ ನೋಡೋಣ. ಪರೇಶ ಮೇಸ್ತ ಅನಾಥವಾಗಿ ಸತ್ತ. ರಕ್ತ ಬಲಿದಾನವಾದರೂ ಏನೂ ಆಗಲಿಲ್ಲ. ಅವನ ಹೆಣದ ಮೇಲೆ ರಾಜಕೀಯ ಮಾಡಿದವರು ನೀವು. ಅವನ ಆತ್ಮಕ್ಕೆ ನ್ಯಾಯ ಕೊಡಿಸಿ ಅಂತಾ ಕೇಳುತ್ತಿದೆ. ಅವನ ಆತ್ಮ ಶಾಂತಿಯಿಲ್ಲದೆ ಇನ್ನೂ ಅಲೆಯುತ್ತಿದೆ. ಹಿಂದೂ ಸಮಾಜ ಉಳಿಸಿಕೊಳ್ಳಲು ಛತ್ರಪತಿ ಶಿವಾಜಿಯಂತೆ ಹೋರಾಡಬೇಕಾದ ಅನಿವಾರ್ಯತೆ ಇದೆ" ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿಂದೂ ದ್ರೋಹಿಗಳು, ಭ್ರಷ್ಟರ ವಿರುದ್ಧ ಕಾರ್ಕಳದಲ್ಲಿ ನನ್ನ ಸ್ಪರ್ಧೆ ಫೈನಲ್ : ಪ್ರಮೋದ್ ಮುತಾಲಿಕ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದರು. ಕಾರ್ಕಳದಲ್ಲಿ ಮಾತನಾಡಿದ್ದ ಅವರು, ಇಡೀ ಕ್ಷೇತ್ರದಲ್ಲಿ ಏಳೆಂಟು ಬಾರಿ ಪ್ರವಾಸ ಮಾಡಿದ್ದೇನೆ, ಎಲ್ಲರ ಧ್ವನಿ ಒಂದೇ ಮುತಾಲಿಕರೇ ನೀವು ಇಲ್ಲಿ ನಿಂತುಕೊಳ್ಳಬೇಕು ಎಂದಿದ್ದಾರೆ. ಇಲ್ಲಿ ಹಿಂದೂಗಳಿಗೆ ನೋವಾಗಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವ ಮತ್ತು ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.