ಪಾಕಿಸ್ತಾನ ಪ್ರಕ್ಷುಬ್ಧ: ಇಮ್ರಾನ್ ಖಾನ್ ಬಂಧನದ ಬಳಿಕ ಭುಗಿಲೆದ್ದ ಆಕ್ರೋಶ
🎬 Watch Now: Feature Video
ಇಸ್ಲಾಮಾಬಾದ್ (ಪಾಕಿಸ್ತಾನ): ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಬಂಧನ ಖಂಡಿಸಿ ಪಾಕಿಸ್ತಾನದಾದ್ಯಂತ ನಿನ್ನೆಯಿಂದ(ಮಂಗಳವಾರ) ಪ್ರತಿಭಟನೆಗಳು ಭುಗಿಲೆದ್ದಿವೆ. ಹಲವಾರು ನಗರಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ. ಮುಖ್ಯ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
ಕರಾಚಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. ಪ್ರತಿಭಟನಾಕಾರರು ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯನ್ನೂ ಪ್ರವೇಶಿಸಿದರು. ಫೈಸಲಾಬಾದ್ ಮತ್ತು ಕ್ವೆಟ್ಟಾದಲ್ಲಿ ನಡೆದ ಘರ್ಷಣೆಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದಲ್ಲೂ ಪ್ರತಿಭಟನೆ: ಇಮ್ರಾನ್ ಖಾನ್ ಬಂಧನ ವಿರೋಧಿಸಿ ವಾಷಿಂಗ್ಟನ್ ಡಿಸಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ನಿವಾಸದ ಹೊರಗೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆಗಾಗಿ ಲಾಹೋರ್‌ನಿಂದ ದೇಶದ ರಾಜಧಾನಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅರೆಸೈನಿಕ ರೇಂಜರ್‌ಗಳು (ಫೆಡರಲ್ ಸರ್ಕಾರ) ಮಂಗಳವಾರ ಬಂಧಿಸಿದ್ದಾರೆ. ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹಾಜರಿದ್ದಾಗ ಅಲ್-ಖದೀರ್ ಟ್ರಸ್ಟ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅವರ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. ಹಿರಿಯ ಸೇನಾಧಿಕಾರಿಯ ವಿರುದ್ಧ ಖಾನ್ ಅವರು ಆಧಾರರಹಿತ ಆರೋಪ ಹೊರಿಸಿದ್ದಾರೆ ಎಂದು ಪ್ರಬಲ ಸೇನೆ ಆರೋಪಿಸಿದ ಒಂದು ದಿನದ ನಂತರ ಈ ಬಂಧನ ನಡೆದಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅವಿಶ್ವಾಸ ಮತದ ಮೂಲಕ ಪದಚ್ಯುತಗೊಳಿಸಿದ ನಂತರ ಖಾನ್ ಅವರು ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ಆಡಳಿತಾರೂಢ ಮೈತ್ರಿಕೂಟದ ರಾಜಕೀಯ ಪಿತೂರಿ ಎಂದು ದೂರಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್..