Watch... ಛತ್ತೀಸ್ಗಢದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು, 9 ಬೋಗಿಗಳು ಚೆಲ್ಲಾಪಿಲ್ಲಿ - goods train derailed near Bilaspur
🎬 Watch Now: Feature Video
ಬಿಲಾಸ್ಪುರ(ಛತ್ತೀಸ್ಗಢ) : ಒಡಿಶಾದಲ್ಲಿ ತ್ರಿವಳಿ ರೈಲುಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ 280 ಕ್ಕೂ ಅಧಿಕ ಜನರು ಮೃತಪಟ್ಟ ಘಟನೆ ನಡೆದಿತ್ತು. ಇದಾದ ಬಳಿಕ ಹಲವೆಡೆ ಹಳಿ ತಪ್ಪಿ ಗೂಡ್ಸ್ ರೈಲುಗಳು ಅಪಘಾತಕ್ಕೀಡಾದ ವರದಿಗಳು ಬಂದಿವೆ. ಇಂದು ಕೂಡ ಅಂಥಹದ್ದೇ ವಿದ್ಯಮಾನ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಜರುಗಿದೆ.
ಜಾಂಜ್ಗೀರ್ -ಚಂಪಾ ಜಿಲ್ಲೆಯ ಬಿಲಾಸ್ಪುರ ವಿಭಾಗದ ಅಕಲ್ತಾರಾ ಯಾರ್ಡ್ ಬಳಿ ಗೂಡ್ಸ್ ರೈಲು ಹಳಿ ತಪ್ಪಿ 9 ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೋಗಿಗಳನ್ನ ಮತ್ತೆ ಹಳಿಗೆ ಜೋಡಿಸುವ ಕಾರ್ಯ ನಡೆದಿದೆ. ರೈಲು ಹಳಿ ತಪ್ಪಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿವಳಿ ರೈಲು ದುರಂತ: ಜೂನ್ 2ರಂದು ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು, ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತ. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿದ್ದವು. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬೋಗಿಗಳಿಗೆ ವೇಗವಾಗಿ ಗುದ್ದಿತ್ತು. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿ, 280 ಕ್ಕೂ ಅಧಿಕ ಜನರು ದಾರುಣವಾಗಿ ಸಾವನ್ನಪ್ಪಿದ್ದರು. ತನಿಖೆ ನಡೆಸಿದ ಸಿಬಿಐ ಮೂವರನ್ನು ಬಂಧಿಸಿತ್ತು. 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಒಡಿಶಾ ತ್ರಿವಳಿ ರೈಲು ಅಪಘಾತ ಕೇಸ್: ಸಿಬಿಐ ಬಂಧಿತ ಮೂವರು ಅಧಿಕಾರಿಗಳು ಸೇರಿ 7 ರೈಲ್ವೆ ನೌಕರರ ಅಮಾನತು