ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 45,124 ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 8,287 ಮನೆಗಳ ನಿರ್ಮಾಣ ಮುಗಿದಿದೆ. ಇನ್ನು, 31,626 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಈ ಯೋಜನೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಂಪರ್ಕ ವಿದ್ಯುತ್ ಸಂಪರ್ಕ, ಒಳಚರಂಡಿ ಹಾಗೂ ಎಸ್.ಟಿ.ಪಿ. ಒದಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿರ್ಮಾಣಗೊಂಡಿರುವ ಮನೆಗಳಿಗೆ ಫಲಾನುಭವಿಗಳು ಹೋಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ, ಈ ಯೋಜನೆಗೆ ವಿಶೇಷವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರ 660 ಕೋಟಿ ರೂ. ಹಣ ಬಿಡುಗಡೆ ಮಾಡಬೇಕೆಂದು ದೆಹಲಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ.
ವಿವಿಧ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ವಸತಿ ಇಲಾಖೆ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಶೇ.18ರಷ್ಟು ಜಿಎಸ್ಟಿ: ಶೇ.18ರಷ್ಟು ಜಿಎಸ್ಟಿಯಿಂದಾಗಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳು ತಲಾ ಒಂದೂವರೆ ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತಿದೆ. ಇದು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಹೊರೆಯಾಗಲಿದ್ದು, ಅಧಿಕ ಹಣ ಪಾವತಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಡವರ ಮನೆ ನಿರ್ಮಾಣಕ್ಕೆ ವಿಧಿಸುತ್ತಿರುವ ಜಿಎಸ್ಟಿ ತೆರಿಗೆ ರದ್ದುಗೊಳಿಸಬೇಕಾದ ತುರ್ತು ಅಗತ್ಯ ಇರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂಲಭೂತ ಸೌಲಭ್ಯ ಕಲ್ಪಿಸುವುದು, ಬಡವರ ಮನೆ ನಿರ್ಮಾಣಕ್ಕೆ ವಿಧಿಸುತ್ತಿರುವ ಶೇ.18ರಷ್ಟು ಜಿಎಸ್ಟಿ ರದ್ದುಗೊಳಿಸುವುದು ಸೇರಿದಂತೆ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಒಟ್ಟು 2,865 ಕೊಳೆಗೇರಿಗಳಿದ್ದು, ಆ ಪೈಕಿ 635 ಕೊಳಗೇರಿಗಳು ಬೆಂಗಳೂರಿನಲ್ಲಿ ಇವೆ. ಕೊಳೆಗೇರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ 3,682 ಕೋಟಿ ರೂ. ಹಣ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆಯೂ ಕೇಂದ್ರ ವಸತಿ ಹಾಗೂ ಕೊಳೆಗೇರಿ ಮಂಡಳಿ ಸಚಿವರ ಗಮನ ಸೆಳೆಯಲು ತೀರ್ಮಾನಿಸಲಾಗಿದೆ.
"ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳಡಿ ಬಡವರಿಗೆ ನಿರ್ಮಿಸುವ ಮನೆಗಳಿಗೆ ಶೇ.18ರಷ್ಟು ಜಿಎಸ್ಟಿ ತೆರಿಗೆ ವಿಧಿಸುತ್ತಿರುವುದನ್ನು ರದ್ದುಗೊಳಿಸುವಂತೆ ಕೋರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶೀಘ್ರವೇ ಭೇಟಿ ಮನವಿ ಸಲ್ಲಿಸಲಾಗುವುದು. ಅದೇ ರೀತಿ ಕೇಂದ್ರ ನಗರಾಭಿವೃದ್ಧಿ, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಸಚಿವರುಗಳನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತಾವನೆಗಳಿಗೆ ಅನುಮತಿ ದೊರಕಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು" ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
''ರಾಜ್ಯದೆಲ್ಲೆಡೆ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ ಜಿಲ್ಲಾ ಹಾಗೂ ತಾಲ್ಲೂಕುವಾರು 171 ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕಾಗಿ 60:40 ಹಂಚಿಕೆ ಸೂತ್ರದಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಅಲ್ಪಸಂಖ್ಯಾತರ ಕಾಲೋನಿಗಳನ್ನು ಅಭಿವೃದ್ಧಿಪಡಿಸಬಹುದು'' ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮನೆ ನಿರ್ಮಾಣಕ್ಕೆ ಎರಡೂ ಸರ್ಕಾರಗಳ ಆರ್ಥಿಕ ಸಹಾಯ ಎಷ್ಟು?: ಪ್ರಧಾನಮಂತ್ರಿ ಆವಾಸ್ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಪ್ರತಿ ಮನೆಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಎಸ್ಸಿ/ಎಸ್ಟಿಗೆ ಒಟ್ಟು 1,50,000 ರೂ. ನೀಡಲಾಗುತ್ತಿದ್ದು, ಅದರಲ್ಲಿ ಕೇಂದ್ರ ಸರ್ಕಾರ 72,000 ರೂ. ಹಾಗೂ ರಾಜ್ಯ ಸರ್ಕಾರ 78,000 ರೂ.ಗಳನ್ನು ನೀಡುತ್ತಿವೆ.
ಸಾಮಾನ್ಯ ವರ್ಗಕ್ಕೆ 1,20,000 ರೂ. ನೀಡಲಾಗುತ್ತಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಕೊಡುವುದು 72,000 ರೂ. ಹಾಗೂ ರಾಜ್ಯ ಸರ್ಕಾರ ನೀಡುವುದು 48,000 ರೂ. ಆಗಿದೆ. ಎಲ್ಲಾ ವರ್ಗದ ಫಲಾನುಭವಿಗಳಿಗೆ ಕನಿಷ್ಠ 10,000 ರೂ., ಈ ಯೋಜನೆಯಡಿಯಲ್ಲಿ ಒದಗಿಸಲಾಗುವ ಆರ್ಥಿಕ ಸಹಾಯಧನದ ಜೊತೆಗೆ, ಫಲಾನುಭವಿಯು ಕನಿಷ್ಠ 30,000 ರೂ.ಗಳನ್ನು ಅಥವಾ ತನ್ನ ಸಾಮರ್ಥ್ಯ ಹಾಗೂ ವಸತಿಯ ಅವಶ್ಯಕತೆಗೆ ಅನುಸಾರವಾಗಿ ಸಾಧ್ಯವಾದಷ್ಟು ಸ್ವಂತ ಉಳಿತಾಯ ಹೂಡಿಕೆ ಮಾಡಿ ಹೆಚ್ಚಿನ ಹಾಗೂ ಉತ್ತಮ ಸೌಲಭ್ಯಗಳನ್ನು ಹೊಂದಬಹುದು. ಈ ಯೋಜನೆಯಡಿ ಸ್ಥಳೀಯ ಬ್ಯಾಂಕ್ನಿಂದ 2 ಲಕ್ಷ ರೂ.ವರೆಗೆ ಶೇ.4ರಷ್ಟು ವಾರ್ಷಿಕ ಬಡ್ಡಿದರದಲ್ಲಿ ಡಿಆರ್ಐಯಡಿ ಸಾಲವನ್ನು ಆಯ್ಕೆಯಾದ ಫಲಾನುಭವಿಗಳು ಪಡೆದುಕೊಳ್ಳಲು ಅವಕಾಶವಿದೆ.
ಕೇಂದ್ರ ಸರ್ಕಾರದಿಂದ ನೀಡಲಾದ ಫಲಾನುಭವಿಗಳ ಪಟ್ಟಿಯಿಂದ ನಿಯಮಾನುಸಾರ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಯ್ಕೆ ಪಟ್ಟಿಗೆ ಅನುಮೋದನೆ ಪಡೆಯಲಾಗುತ್ತದೆ. ನಂತರ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಅನುಮೋದನೆಯೊಂದಿಗೆ ನಿಗಮದ ಅನುಮೋದನೆ ನೀಡಲಾಗುತ್ತದೆ.
ಯೋಜನೆಯ ಅನುಷ್ಠಾನ: ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗದಿಪಡಿಸುವ ಗುರಿಗೆ ಅನುಗುಣವಾಗಿ ಗುರಿ ನಿಗದಿಪಡಿಸಲಾಗುತ್ತದೆ. ಮೀಸಲಾತಿ ಎಸ್ಸಿ/ಎಸ್ಟಿ- ಶೇ.60, ಅಲ್ಪಸಂಖ್ಯಾತ- ಶೇ.15, ಸಾಮಾನ್ಯ- ಶೇ.25ರಷ್ಟು ನಿಗದಿ ಮಾಡಲಾಗಿದೆ.
ತಂತ್ರಜ್ಞಾನ ಬಳಕೆ: 2011-12 ನೇ ಸಾಲಿನಿಂದಲೂ ಜಿಪಿಎಸ್ ತಂತ್ರಜ್ಱಆನ ಅವಳಡಿಕೆ ಮಾಡಲಾಗುತ್ತಿದೆ. ಅವ್ಯವಹಾರ ತಡೆಯಲು ಹಾಗೂ ಸರ್ಕಾರದ ಹಣ ದುರುಪಯೋಗವಾಗದಂತೆ ನೋಡಿಕೊಂಡು ಫಲಾನುಭವಿಗಳಿಗೆ ವಸತಿ ಸೌಕರ್ಯವನ್ನು ಪಾರದರ್ಶಕತೆಯ ಮೂಲಕ ನೀಡಲು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.
ಈ ತಂತ್ರಜ್ಞಾನದ ಉಪಯೋಗಗಳು:
- ಪ್ರತಿ ಮನೆಯ ಪ್ರಗತಿ ಹಂತದ ಫೋಟೋವನ್ನು ಜಿಪಿಎಸ್ ಕ್ಯಾಮರಾ ಮೂಲಕ ಸೆರೆ ಹಿಡಿಯಬೇಕು.
- ಒಮ್ಮೆ ವಸತಿ ಸೌಕರ್ಯ ಪಡೆದ ಫಲಾನುಭವಿಗಳ ಪುನರಾವರ್ತನೆಗೆ ತಡೆ.
- ಛಾಯಾಚಿತ್ರದ ಆಧಾರದ ಮೇಲೆ ಅನುದಾನ ಬಿಡುಗಡೆ, ಮಾಹಿತಿಗಾಗಿ ಎಲ್ಲ ಮನೆಗಳ ಫೋಟೋಗಳು ನಿಗಮದ ವೆಬ್ ಸೈಟ್ನಲ್ಲಿ ಲಭ್ಯ ಇರುತ್ತದೆ.
- ಹಣದ ದುರ್ಬಳಕೆಗೆ ತಡೆಯೊಡ್ಡಿದಂತಾಗುತ್ತದೆ.
ಅರ್ಹತೆ ಮತ್ತು ಷರತ್ತುಗಳು:
- ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವಾಸಿ ಆಗಿರಬೇಕು.
- ಮನೆ/ನಿವೇಶನ ಹಕ್ಕುಪತ್ರವನ್ನು ಹೆಂಡತಿ ಹೆಸರಿನಲ್ಲಿ ವಿತರಿಸಬೇಕು.
- ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು.
ಇದನ್ನೂ ಓದಿ: ಹಾವೇರಿ: ಲಿಂಗತ್ವ ಅಲ್ಪಸಂಖ್ಯಾತರ ನೇತೃತ್ವದಲ್ಲಿ ನಡೆಯುವ ಅಕ್ಕ ಕೆಫೆ ನಾಳೆಯಿಂದ ಪ್ರಾರಂಭ