ಬೆಂಗಳೂರು: ಪೋಷಕರ ನಿರ್ವಹಣೆ ಮತ್ತು ಕಲ್ಯಾಣ ಹಾಗೂ ಹಿರಿಯ ನಾಗರಿಕ ಕಾಯಿದೆ 2007ರ ಸೆಕ್ಷನ್ 16ರಡಿ ಆಸ್ತಿ ವರ್ಗಾವಣೆ ಹಕ್ಕು ರದ್ಧತಿ ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ತಂದೆ ಸಹೋದರನಿಗೆ ಮಾಡಿದ್ದ ದಾನ ಪತ್ರವನ್ನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮರು ಪರಿಶೀಲಿಸಲು ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೆ.ಲೋಕೇಶ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪೋಷಕರ ನಿರ್ವಹಣೆ ಮತ್ತು ಕಲ್ಯಾಣ ಹಾಗೂ ಹಿರಿಯ ನಾಗರಿಕ ಕಾಯಿದೆ 2007ರ ಸೆಕ್ಷನ್ 16ರಡಿ ಆಸ್ತಿ ವರ್ಗಾವಣೆ ಸಂಬಂಧ ತಂದೆ ಮಾಡಿದ ದಾನಪತ್ರ ರದ್ದು ಕೋರಿ ಮಕ್ಕಳು ಅರ್ಜಿ ಸಲ್ಲಿಸಲಾಗುವುದಿಲ್ಲ. ಅಗತ್ಯವಿದ್ದಲ್ಲಿ ಆಸ್ತಿ ವ್ಯಾಜ್ಯಗೆ ಸಿವಿಲ್ ಕೋರ್ಟ್‌ನಲ್ಲಿ ಅಸಲು ಧಾವೆ ಹೂಡಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನಿರ್ದೇಶನ ನೀಡಿದೆ.
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, ಹಿರಿಯ ನಾಗರಿಕರ ಕಾಯಿದೆ ಪ್ರಕಾರ ಮೇಲ್ಮನವಿ ಅಧಿಕಾರ ಪೋಷಕರಿಗೆ ಮಾತ್ರ ಇದೆಯೇ ಹೊರತು ಮಕ್ಕಳಿಗಲ್ಲ. ಅಯ್ಯಪ್ಪ ಡಿಸಿ ಎದುರು ಸಲ್ಲಿಸಿದ್ದ ಮೇಲ್ಮನವಿ ಸ್ವೀಕಾರಾರ್ಹವಲ್ಲ, ಅವರಿಗೆ ಮೇಲ್ಮನವಿ ಅಧಿಕಾರವಿಲ್ಲ ಎಂದು ಆದೇಶಿಸಿದೆ.
ಹಿರಿಯ ನಾಗರಿಕರ ಕಾಯಿದೆ ಸೆಕ್ಷನ್ 23ರ ಪ್ರಕಾರ ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿದ್ದರೆ, ಆಗ ಮಕ್ಕಳು ತಮ್ಮ ದೈಹಿಕ ಅಗತ್ಯತೆಗಳು ಮತ್ತು ಮೂಲಸೌಕರ್ಯ ಒದಗಿಸಬೇಕೆಂಬ ಷರತ್ತುಗಳನ್ನು ವಿಧಿಸಬಹುದು. ಆನಂತರ ಒಂದು ವೇಳೆ ಅವರು ಆ ನಿರ್ಬಂಧನೆಗಳನ್ನು ಪೂರೈಸದೇ ಇದ್ದರೆ ಅಂತಹ ಸಂದರ್ಭದಲ್ಲಿಎಸಿ ಮುಂದೆ ತಮ್ಮ ದಾನಪತ್ರ ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಅದರಂತೆ ಸೆಕ್ಷನ್ 16ರಡಿ ಎಸಿ/ಡಿಸಿ ಅವರ ಅರ್ಜಿಗಳನ್ನು ಪರಿಗಣಿಸಿ ಸೂಕ್ತ ಆದೇಶವನ್ನು ಹೊರಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಕೃಷ್ಣ 2019ರ ಫೆ.27ರಂದು ಆಡುಗೋಡಿಯ ತಮ್ಮ ಆಸ್ತಿಯಲ್ಲಿ 1,500 ಚದರ ಅಡಿ ಜಾಗವನ್ನು ಹಿರಿಯ ಪುತ್ರ ಅಯ್ಯಪ್ಪ ಅವರ ಹೆಸರಿಗೆ ದಾನಪತ್ರ ಮಾಡಿದ್ದರು. ಕೆಲವು ವರ್ಷಗಳ ಬಳಿಕ ಅವರು ಹಿರಿಯ ನಾಗರಿಕರ ಕಾಯಿದೆ ಪ್ರಕಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ, ಅಕ್ರಮವಾಗಿ ದಾನಪತ್ರ ಮಾಡಿಸಿಕೊಳ್ಳಲಾಗಿದೆ. ಜೊತೆಗೆ ತಮ್ಮ ಹಿರಿಯ ಪುತ್ರ ತನಗೆ ಯಾವುದೇ ಸೌಕರ್ಯ ನೀಡುತ್ತಿಲ್ಲ. ಹಾಗಾಗಿ ದಾನಪತ್ರ ರದ್ದು ಮಾಡುವಂತೆ ಕೋರಿದ್ದರು. 2023ರ ಫೆ.27ರಂದು ಉಪ ವಿಭಾಗಾಧಿಕಾರಿ ಮನವಿ ಮಾನ್ಯ ಮಾಡಿ, ದಾನಪತ್ರ ರದ್ದು ಮಾಡಿದ್ದರು.
ಆನಂತರ ಹಿರಿಯ ನಾಗರಿಕ ಕಾಯಿದೆ ಸೆಕ್ಷನ್ 16ರ ಪ್ರಕಾರ ಅಯ್ಯಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ, 2023ರ ಜು.14ರಂದು ಕೃಷ್ಣ ಆಸ್ತಿಯನ್ನು ತಮ್ಮ ಎರಡನೇ ಪುತ್ರ ಕೆ.ಲೋಕೇಶ್ ಹೆಸರಿಗೆ ಉಯಿಲು (ವಿಲ್) ಮಾಡಿದ್ದರು. ಮೊದಲನೇ ಪುತ್ರ ಸಲ್ಲಿಸಿದ್ದ ಮೇಲ್ಮನವಿ ಬಾಕಿ ಇದ್ದಾಗಲೇ ಕೃಷ್ಣ ಸಾವನ್ನಪ್ಪಿದ್ದರು. ಅವರ ಜಾಗದಲ್ಲಿ ಲೋಕೇಶ್ ಮತ್ತ ಅವರ ಸಹೋದರಿ ಆಸ್ತಿಗೆ ಉತ್ತರಾಧಿಕಾರಿಗಳಾಗಿದ್ದರು. ಈ ನಡುವೆ 2023ರ ಆ.14ರಂದು ಅಯ್ಯಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಲ್ಲಾಧಿಕಾರಿ ಮಾನ್ಯ ಮಾಡಿದ್ದರು.
ಆ ಆದೇಶವನ್ನು ಲೋಕೇಶ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಏಕ ಸದಸ್ಯಪೀಠ ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಿ ಹೊಸದಾಗಿ ಪರಿಗಣಿಸಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು.
2024ರ ಜ.24 ರಂದು ಹಿಂದೆ ಜಿಲ್ಲಾಧಿಕಾರಿ 2023ರ ಫೆ.27ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದರು. ಅಲ್ಲದೇ, ಉಪವಿಭಾಗಾಧಿಕಾರಿಗೆ ಅಯ್ಯಪ್ಪ ಹೆಸರಿಗೆ ಖಾತೆ ಮಾಡಿಕೊಡುವಂತೆ ನಿರ್ದೇಶನ ನೀಡಿದ್ದರು. ಇದನ್ನು ಪ್ರಶ್ನಿಸಿ ಲೋಕೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಭೂ ದಾಖಲೆಗಳ ಜಂಟಿ ನಿರ್ದೇಶಕರ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ