ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ: ವಿಡಿಯೋ - ನಾಗರ ಪಂಚಮಿ ವಿಡಿಯೋ
🎬 Watch Now: Feature Video
ದೊಡ್ಡಬಳ್ಳಾಪುರ : ಇಂದು ನಾಡಿನಾದ್ಯಂತ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆಮಾಡಿದೆ. ನಾಗರಾಧನೆಯ ಕ್ಷೇತ್ರವಾಗಿರುವ ಘಾಟಿಯಲ್ಲಿ ಭಕ್ತರ ದಂಡು ಹರಿದು ಬಂದಿದೆ. ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿದ ಮಹಿಳೆಯರು ಮತ್ತು ಯುವತಿಯರು ದೇವರ ಕೃಪೆಗೆ ಪಾತ್ರರಾದರು.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿ ಹಬ್ಬದ ಕಳೆಕಟ್ಟಿದೆ. ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಮಹಿಳೆಯರು ಮೊದಲಿಗೆ ನಾಗರ ಕಲ್ಲುಗಳನ್ನು ಸ್ವಚ್ಛವಾದ ಶುದ್ಧ ನೀರಿನಿಂದ ತೊಳೆದು ಅರಿಶಿನ ಕುಂಕುಮ ಹೂವಿಟ್ಟರು. ಅನಂತರ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ನಾಗರಪಂಚಮಿ ದಿನ ನಾಗರಕಲ್ಲಿಗೆ ಹಾಲೆರೆದರೆ ಸರ್ಪದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಭಕ್ತರದ್ದು. ಈ ಹಿನ್ನೆಲೆ ಹೆಚ್ಚಿನ ಭಕ್ತರು ಇಂದು ಕ್ಷೇತ್ರಕ್ಕೆ ಭೇಟಿ ನೀಡುವರು.
ಕ್ಷೇತ್ರದ ಅವರಣದಲ್ಲಿ ದೇವಾಲಯದ ಹೊರಗೆ ಸುಮಾರು 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ಮಹಿಳೆಯರು ಮತ್ತು ಯುವತಿಯರು ಭಯ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
"ನಾವು ಯಾವುದೇ ಶುಭ ಕಾರ್ಯ ಮಾಡಬೇಕು ಎಂದರೆ ಗಣಪತಿ ಹಾಗೂ ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ಅನುಗ್ರಹ ಬೇಕೇ ಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಘಾಟಿ ಕ್ಷೇತ್ರದಲ್ಲಿ ನಾಗಾರಾಧನೆ ಮಾಡುತ್ತಿದ್ದೇವೆ. ದೇವರು ನಮಗೆ ಎಲ್ಲ ರೀತಿಯಲ್ಲಿ ಒಳ್ಳೆಯದು ಮಾಡಿದ್ದಾರೆ" ಎಂದು ಭಕ್ತರಾದ ಶಶಿಕಲಾ ತಿಳಿಸಿದರು.
ಘಾಟಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿರುವ ನಾಗರಕಲ್ಲಿಗೆ ಹಾಲಿನಾಭಿಷೇಕ, ತುಪ್ಪದಾಭಿಷೇಕ, ನೀರಿನಾಭಿಷೇಕ ಮಾಡಿದರೆ ನಾಗದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಕಳೆದ ಹತ್ತು ವರ್ಷಗಳಿಂದಲೇ ದೇವಸ್ಥಾನ ಹಿಂಭಾಗದಲ್ಲಿ ನಾಗರ ಕಲ್ಲನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿ ವರ್ಷ ಪೂಜೆ ಪುನಸ್ಕಾರ ಮಾಡುತ್ತಿರುವುದರಿಂದ ನಮಗೆ ಒಳ್ಳೆಯದು ಆಗಿದೆ ಎಂದು ಮತ್ತೋರ್ವ ಭಕ್ತ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ಹಾವೇರಿಯಲ್ಲಿ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ: ವಿಡಿಯೋ