ಪೊಲೀಸ್ ಸೋಗಿನಲ್ಲಿ ₹1 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಎಗರಿಸಿದ ಖದೀಮರು- ಸಿಸಿಟಿವಿ ದೃಶ್ಯ - ಚಿನ್ನದ ಗಟ್ಟಿ ಕಸಿದು ಪರಾರಿ
🎬 Watch Now: Feature Video

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಬೆದರಿಸಿದ ದುಷ್ಕರ್ಮಿಗಳು 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮೂರು ದಿನಗಳ ಹಿಂದೆ ನಗರದ ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ನಡೆದಿದೆ. ರಾಯಚೂರಿನಿಂದ ಚಿನ್ನ ಖರೀದಿಗೆ ಬಂದಿದ್ದ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಎಂಬವರನ್ನು ಪೊಲೀಸರೆಂದು ಪರಿಚಯಿಸಿಕೊಂಡ ಇಬ್ಬರು ಅಪರಿಚಿತರು ಚಿನ್ನದ ಗಟ್ಟಿ ಪಡೆದುಕೊಂಡು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದರು.
ರಾಯಚೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ, ಅಂಗಡಿ ಮಾಲೀಕರ ಸೂಚನೆಯಂತೆ ಬೆಂಗಳೂರಿಗೆ ಬಂದು ಚಿನ್ನ ಖರೀದಿಸಿದ್ದರು. ವಾಪಸ್ ರಾಯಚೂರಿಗೆ ತೆರಳಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಕೃತ್ಯ ಎಸಗಿದ್ದಾರೆ. ಅಸಲಿ ಪೊಲೀಸರೇ ಇರಬಹುದು ಎಂದು ನಂಬಿದ ಇಬ್ಬರು ಠಾಣೆ ಬಳಿ ಬಂದು ವಿಚಾರಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ, ಹಿಂದಿ ಮಾತನಾಡುವ ವಿಚಾರಕ್ಕೆ ಮಹಿಳೆ - ಆಟೋ ಚಾಲಕನ ನಡುವೆ ವಾಗ್ವಾದ