ಕ್ಯಾನ್ಸರ್‌ನಿಂದ ಮೃತಪಟ್ಟ ಸ್ನೇಹಿತ; ದುಃಖ ತಾಳಲಾರದೆ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ!
🎬 Watch Now: Feature Video
ಫಿರೋಜಾಬಾದ್ (ಉತ್ತರ ಪ್ರದೇಶ): ಸ್ನೇಹವೆಂದರೆ ಕೇವಲ ಖುಷಿಯಲ್ಲಿ ಮಾತ್ರ ಜೊತೆಗಿರುವುದಲ್ಲ, ದುಃಖದಲ್ಲೂ ಜೊತೆಗಿರಬೇಕು. ಆಗ ಮಾತ್ರ ನಿಜವಾದ ಸ್ನೇಹವೆನಿಸಿಕೊಳ್ಳುವುದು ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ಸ್ನೇಹಿತ ದುಃಖದಲ್ಲಿ ಮಾತ್ರವಲ್ಲ ಸಾವಿನಲ್ಲೂ ಜತೆಯಾಗಿದ್ದಾರೆ. ಅವಿನಾಭಾವ ಸ್ನೇಹಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ತೆತ್ತಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.
ವಿವರ: ವ್ಯಕ್ತಿಯೊಬ್ಬ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಯಮುನಾ ನದಿ ತಟದಲ್ಲಿ ಅಂತ್ಯಕ್ರಿಯೆ ನೆರವೇರುತ್ತಿತ್ತು. ಆ ಸಂದರ್ಭದಲ್ಲಿ ದುಃಖ ತಾಳಲಾರದೆ ಅವರ ಸ್ನೇಹಿತ ಕೂಡ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಹೇಳುವ ಪ್ರಕಾರ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಶೋಕ್ ಎಂಬುವವರು ಮೃತಪಟ್ಟಿದ್ದರು. ಭಾನುವಾರ ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಯಮುನಾ ನದಿ ಬಳಿ ಅವರ ಅಂತ್ಯಕ್ರಿಯೆ ನಡೆಯುತ್ತಿತ್ತು. ಆಗ ಮೃತನ ಸ್ನೇಹಿತ ಆನಂದ್ ರಜಪೂತ್ ಆಗಮಿಸಿದ್ದರು. ಜನರು ಅಂತ್ಯಕ್ರಿಯೆ ಮಾಡಿದ ಜಾಗದಿಂದ ಹೋಗುತ್ತಿರುವಾಗ ಆತ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿದಿರಿನ ಸಹಾಯದಿಂದ ಅವರನ್ನು ಹೊರತೆಗೆಯಲಾಯಿತು. ಆದರೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣ ಅವರನ್ನು ಆಗ್ರಾ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಆದರೆ ಚಿಕತ್ಸೆ ಫಲಿಸದೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಾಗ್ಲಾ ಖಂಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ರೀಲ್ಸ್ ಹುಚ್ಚಾಟಕ್ಕೆ ಇಬ್ಬರು ಮಹಿಳೆಯರು ಬಲಿ: ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್