ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಂಪತಿ ಮತ ಚಲಾವಣೆ
🎬 Watch Now: Feature Video
ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾನಕ್ಕಾಗಿ ತವರು ಜಿಲ್ಲೆಗೆ ಆಗಮಿಸುರವ ಮಲ್ಲಿಕಾರ್ಜುನ ಖರ್ಗೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪತ್ನಿ ರಾಜಾಬಾಯಿ ಖರ್ಗೆ ಜೊತೆಗೆ ಆಗಮಿಸಿದ್ದಾರೆ. ಇನ್ನು ಎಐಸಿಸಿ ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ತವರಿನಲ್ಲಿ ಖರ್ಗೆ ಮತಚಲಾವಣೆ ಮಾಡಿದ್ದಾರೆ.
ಕಲಬುರಗಿ ದಕ್ಷಿಣ ಕ್ಷೇತ್ರದ ಬಸವನಗರದಲ್ಲಿನ ಸಮುದಾಯ ಭವನ ಕೀರ್ತಿ ಎಜುಕೇಷನ್ ಸೂಸೈಟಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬೂತ್ ಸಂಖ್ಯೆ 120 ರಲ್ಲಿ ಖರ್ಗೆ ದಂಪತಿ ಮತದಾನ ಮಾಡಿದರು. ಮತದಾನದ ನಂತರ ಮಾತನಾಡಿದ ಅವರು, 1967ರಿಂದ ಇಲ್ಲಿಯ ವರೆಗೂ ಇದೇ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದೇನೆ. ಸುಮಾರು 28 ಬಾರಿ ಮತ ಚಲಾಯಿಸಿದ್ದೇನೆ ಎಂದರು.
ಇಲ್ಲಿಯ ಜನರ ಬೆಂಬಲ ಪ್ರೋತ್ಸಾಹ , ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಅದಕ್ಕಾಗಿ ನನ್ನ ಮತಗಟ್ಟೆ ಬದಲಾವಣೆ ಮಾಡಿಲ್ಲ. ಪ್ರತಿಬಾರಿ ಚುನಾವಣೆ ವೇಳೆ ನಾನು ಮತ್ತು ನನ್ನ ಪತ್ನಿ ಇಲ್ಲಿಗೆ ಬಂದು ಮತ ಚಲಾಯಿಸಿ ಜನರ ಕ್ಷೇಮಾಭಿವೃದ್ಧಿ ವಿಚಾರಿಸಿ ತೆರಳುತ್ತೇವೆ. ಈ ಬಾರಿ ಕಾಂಗ್ರೆಸ್ ಪರ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯವಿದ್ದು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆಗಳು ಸಿಕ್ಕಿವೆ ಎಂದರು.
ಇನ್ನು ಮತಗಟ್ಟೆಗೆ ಖರ್ಗೆ ಆಗಮಿಸುವ ಮೊದಲು ಅಭಿಮಾನಿಗಳು ಮತಗಟ್ಟೆಯ ವರೆಗೂ ಸುಮಾರು 200 ಮೀಟರ್ನಷ್ಟು ಗ್ರೀನ್ ಕಾರ್ಪೆಟ್ ಹಾಸಿ ಸ್ವಾಗತ ಕೋರಿದರು.
ಇದನ್ನೂ ಓದಿ: ಮೈಸೂರಿನಲ್ಲಿ ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಮತದಾನ