ವೇದಿಕೆ ಮೇಲೆ ಕುಸಿದು ಬಿದ್ದು ಮಲೇಷ್ಯಾದ ಖ್ಯಾತ ಭರತನಾಟ್ಯ ಕಲಾವಿದ ನಿಧನ: ವಿಡಿಯೋ - ಭುವನೇಶ್ವರ

🎬 Watch Now: Feature Video

thumbnail

By

Published : Jun 10, 2023, 10:24 AM IST

ಭುವನೇಶ್ವರ (ಒಡಿಶಾ): ಮಲೇಷ್ಯಾ ಪ್ರಜೆಯಾಗಿರುವ ಖ್ಯಾತ ಭರತನಾಟ್ಯ ಕಲಾವಿದ ಗುರು ಶ್ರೀ ಗಣೇಶನ್ ಶುಕ್ರವಾರ ಭುವನೇಶ್ವರದಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದು ನಿಧನರಾಗಿದ್ದಾರೆ. ವರದಿಗಳ ಪ್ರಕಾರ ಕಳೆದ ಮೂರು ದಿನಗಳಿಂದ ರಾಜಧಾನಿಯ ಭಂಜಾ ಕಲಾ ಮಂಟಪದಲ್ಲಿ ನೃತ್ಯ ಕಾರ್ಯಕ್ರಮ  ಆಯೋಜಿಸಲಾಗಿತ್ತು. ಶುಕ್ರವಾರದ ಸಮಾರೋಪ ಸಮಾರಂಭಕ್ಕೂ ಮುನ್ನ ಗಣೇಶನ್ ಅವರು ದೀಪ ಬೆಳಗಿಸಲು ಇತರ ಅತಿಥಿಗಳೊಂದಿಗೆ ವೇದಿಕೆಗೆ ಬಂದರು. ಆದರೆ, ಏಕಾಏಕಿ ವೇದಿಕೆಯಲ್ಲೇ ಕುಸಿದು ಬಿದ್ದರು.

ತಕ್ಷಣ ಇತರ ಅತಿಥಿಗಳು ಮತ್ತು ನೃತ್ಯಗಾರರು ಅವರನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇಲ್ಲಿನ ಭಂಜಾ ಕಲಾ ಮಂಟಪದಲ್ಲಿ ಮೂರು ದಿನಗಳ ದೇವದಾಸಿ ನೃತ್ಯ ಕಾರ್ಯಕ್ರಮ ನಡೆಸುತ್ತಿರುವ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರಶಸ್ತಿ ಸ್ವೀಕರಿಸಲು ಮಲೇಶಿಯಾದ ಕೌಲಾಲಂಪುರದ ಶ್ರೀ ಗಣೇಶಾಲಯದ ನಿರ್ದೇಶಕರೂ ಆದ ಗಣೇಶನ್ ಇಲ್ಲಿಗೆ ಬಂದಿದ್ದರು. ಶುಕ್ರವಾರ ಕಾರ್ಯಕ್ರಮದ ಕೊನೆಯ ದಿನವಾಗಿತ್ತು.

ಪ್ರತ್ಯಕ್ಷದರ್ಶಿಗಳ ಪ್ರಕಾರ "ಸುಮಾರು 60 ವರ್ಷ ವಯಸ್ಸಿನ ಗುರು ಶ್ರೀ ಗಣೇಶನ್ ಅವರು ತಮ್ಮ ನೃತ್ಯವನ್ನು ಪ್ರದರ್ಶಿಸಿದರು. ಬಳಿಕ ದೀಪವನ್ನು ಬೆಳಗಿಸುವಾಗ ವೇದಿಕೆಯ ಮೇಲೆ ಕುಸಿದು ಬಿದ್ದರು. ತಕ್ಷಣ ಅವರನ್ನು ಇಲ್ಲಿನ ಕ್ಯಾಪಿಟಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿನ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅವರ (ಗಣೇಶ) ಸಾವು ಹಠಾತ್ ಹೃದಯ ಸ್ತಂಭನದಿಂದ ಆಗಿರಬಹುದು. ಅವರ ದೇಹವನ್ನು ಶನಿವಾರ (ಇಂದು) ಬೆಳಗ್ಗೆ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ" ಎಂದು ಕ್ಯಾಪಿಟಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. "ಅವರು ಉತ್ತಮ ಆರೋಗ್ಯ ಹೊಂದಿದ್ದರು ಮತ್ತು ಶುಕ್ರವಾರ ಸಂಜೆ ಗೀತ ಗೋವಿಂದ ಭರತನಾಟ್ಯ ವಾದನವನ್ನು ಪ್ರದರ್ಶಿಸಿದರು. ದುರದೃಷ್ಟವಶಾತ್ ಅವರು ವೇದಿಕೆಯಲ್ಲಿ ದೀಪವನ್ನು ಬೆಳಗಿಸುವಾಗ ಕುಸಿದು ಬಿದ್ದರು" ಎಂದು  ನೃತ್ಯ ಕಾರ್ಯಕ್ರಮ ಆಯೋಜಕ ಜಗಬಂಧು ಜೆನಾ ಮಾಹಿತಿ ನೀಡಿದರು.

ಇದನ್ನೂ ಓದಿ: ಮಂಡ್ಯ: ರಂಗ ಸ್ಥಳದಲ್ಲೇ ಕುಸಿದುಬಿದ್ದು ಬದುಕಿನ ಪಾತ್ರವನ್ನೂ ಮುಗಿಸಿದ ಕಲಾವಿದ!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.