ಕೇರಳ: ವಿಜಯದಶಮಿ ದಿನ ದೇಗುಲಗಳಲ್ಲಿ ಮಕ್ಕಳಿಗೆ ವಿದ್ಯಾರಂಭ- ವಿಡಿಯೋ
🎬 Watch Now: Feature Video
Published : Oct 24, 2023, 5:10 PM IST
ಕೇರಳ: ಸನಾತನ ಹಿಂದೂ ಧರ್ಮದಲ್ಲಿ ಮಗು ವಿದ್ಯೆಯನ್ನು ಮೊದಲ ಬಾರಿಗೆ ಪ್ರಾರಂಭಿಸುವ ಮುನ್ನ ಮತ್ತು ಶಾಲೆಗೆ ಸೇರುವ ಮೊದಲು ಸಾಂಪ್ರದಾಯಿಕವಾಗಿ ಅಕ್ಷರಾಭ್ಯಾಸ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮಗು ವಿದ್ಯಾವಂತನಾಗಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಲಿ ಎಂಬ ಸದುದ್ದೇಶದಿಂದ ಅಕ್ಷರಾಭ್ಯಾಸವನ್ನು ಶುಭದಿನದಂದು ಮಾಡಿಸಲಾಗುತ್ತದೆ. ಅದರಂತೆ ಇಂದು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆಯ ದೇಗುಲಗಳಲ್ಲಿ ಮಕ್ಕಳಿಗೆ ಪೋಷಕರು ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಕೇರಳದ ತ್ರಿಶೂರ್‌ನ ದೇವಸ್ಥಾನದಲ್ಲಿ ವಿದ್ಯಾರಂಭ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಹರಸಲಾಯಿತು.
ತಿರುವನಂತಪುರಂನ ರಾಜಭವನದಲ್ಲಿಯೂ ಮಕ್ಕಳನ್ನು ಕಲಿಕೆಯ ಜಗತ್ತಿಗೆ ಪರಿಚಯಿಸುವ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾಗವಹಿಸಿದ್ದು, ಮಕ್ಕಳ ಮೊದಲ ಬರವಣಿಗೆಗೆ ಜತೆಯಾದರು. ತಿರುವನಂತಪುರಂನ ಪೂಜಪ್ಪುರ ಸರಸ್ವತಿ ಮಂಟಪದಲ್ಲಿಯೂ ವಿದ್ಯಾರಂಭ ನಡೆದಿದ್ದು ಕಾಂಗ್ರೆಸ್ ಸಂಸದ ಶಶಿ ತರೂರ್ ಮಕ್ಕಳ ಕೈ ಹಿಡಿದು ಮೊದಲ ಅಕ್ಷರ ಬರೆಸಿದರು. ಬಳಿಕ ಮಾತನಾಡುತ್ತಾ, "ಕೇರಳದಲ್ಲಿ ವಿಜಯದಶಮಿ ಕಲಿಕೆಯ ಆರಂಭದ ದಿನ. ಆದ್ದರಿಂದ ಮಕ್ಕಳಿಗೆ ಬರೆಯುವುದನ್ನು ಕಲಿಸುವುದು ಹಿರಿಯರ ಜವಾಬ್ದಾರಿ" ಎಂದರು.
ಕೇರಳದಾದ್ಯಂತ ಆಚರಿಸಲಾಗುವ ಹಲವು ಪದ್ಧತಿಗಳಲ್ಲಿ ವಿದ್ಯಾರಂಭಂ ಅಥವಾ 'ಎಜ್ಜಿನಿರುತ್ತು' ಕೂಡ ಒಂದು. ವಿದ್ಯೆ ಎಂದರೆ ಜ್ಞಾನ, ಆರಂಭ ಎಂದರೆ ದೀಕ್ಷೆ. ವಿದ್ಯಾರಂಭ ಜ್ಞಾನದ ದೀಕ್ಷೆಯಾಗಿ ಮಗುವಿನ ಬಾಳಲ್ಲಿ ಶಿಕ್ಷಣದ ಮೊದಲ ಹೆಜ್ಜೆ.
ಇದನ್ನೂ ಓದಿ: ವಿಜಯದಶಮಿಯ ದಿನ ವಿದ್ಯಾರಂಭ: ಮಂಗಳೂರಿನಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ