ಜೈನ ಮುನಿ ಹತ್ಯೆ ಮಾಡಿದವರಿಗೆ ಶೀಘ್ರ ಶಿಕ್ಷೆ ಆಗಬೇಕು: ಜೈನ ಸಾಧುಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ದಿಗಂಬರ ಜೈನರ ಆಗ್ರಹ
🎬 Watch Now: Feature Video
ಶಿವಮೊಗ್ಗ: ಬೆಳಗಾವಿ ಜಿಲ್ಲೆ ಚಿಕ್ಕೂಡಿ ತಾಲೂಕಿನ ಹಿರೆಕೋಡಿಯ ನಂದಿ ಪರ್ವತ ಆಶ್ರಮದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ದಿಗಂಬರ ಜೈನ ಸಂಘ ಬೃಹತ್ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಸಂಘವು, ಆಶ್ರಮದಿಂದ ಮಹಾರಾಜರನ್ನು ಅಪಹರಿಸಿ ಅಮಾನುಷವಾಗಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು.
ಈ ಕೊಲೆ ಜೈನ ಸಮಾಜಕ್ಕೆ ಅಘಾತವನ್ನುಂಟು ಮಾಡಿದೆ. ಮಹಾರಾಜರ ಹತ್ಯೆಯನ್ನು ಜೈನ ಸಮಾಜವು ತೀವ್ರವಾಗಿ ಖಂಡಿಸುತ್ತಿದೆ. ಜೈನ ಸಮುದಾಯದವರು ಅಹಿಂಸಾ ಧರ್ಮದ ಪ್ರತಿಪಾದಕರು. ಇಂತಹ ಜೈನ ಮುನಿಗಳ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಸಮಾಜಕ್ಕೆ ಸರಿ ಮಾರ್ಗವನ್ನು ತೋರಿಸುವ ಜೈನ ಮುನಿಗಳ ಹತ್ಯೆ ಹೇಯ ಕೃತ್ಯ ಎಂದು ಪ್ರತಿಭಟಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ದಿಗಂಬರ ಸಂಘದ ಅಧ್ಯಕ್ಷ ಪ್ರಭಾಕರ್, ಜೈನ ದಿಗಂಬರರು ಯಾರಿಗೂ ಯಾವತ್ತೂ ಸಮಸ್ಯೆ ಮಾಡಿದವರಲ್ಲ. ಈಗ ಚಾತುರ್ಮಾಸ ನಡೆಯುತ್ತಿದೆ. ಈ ವೇಳೆ ಜೈನ ಮುನಿಗಳು ಓಡಾಡಿದರೆ ಕ್ರಿಮಿಗಳು, ಕೀಟಗಳಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿ ಒಂದೇ ಸ್ಥಳದಲ್ಲಿ ತಟಸ್ಥವಾಗಿದ್ದು ಚಾತುರ್ಮಾಸ ಆಚರಣೆ ನಡೆಸುತ್ತಾರೆ. ಜೈನ ಮುನಿಗಳನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಾನೂನಾತ್ಮಕವಾದ ಶಿಕ್ಷೆಯನ್ನು ಶೀಘ್ರದಲ್ಲಿ ಸಿಗುವಂತಾಗಬೇಕಿದೆ. ಅಲ್ಲದೆ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಪ್ರತಿಭಟನಾ ಮೌನ ಮೆರವಣಿಗೆ, ಜಿಲ್ಲಾಧಿಕಾರಿಗೆ ಮನವಿ