ಧಾರವಾಡದಲ್ಲಿ ವರುಣಾರ್ಭಟ: ಹೊಲ - ಗದ್ದೆಗಳು ಜಲಾವೃತ, ಟ್ರ್ಯಾಕ್ಟರ್ ಮೂಲಕ ಸೇತುವೆ ದಾಟಿದ ಅಜ್ಜಿ - etv bharat kannada
🎬 Watch Now: Feature Video
ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊಲ - ಗದ್ದೆಗಳು ಜಲಾವೃತವಾಗಿವೆ. ಧಾರವಾಡ ತಾಲೂಕಿನ ನವಲೂರ, ಸೋಮಾಪೂರ, ಹೆಬ್ಬಳ್ಳಿ, ಶಿವಳ್ಳಿ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಸೋಯಾಬೀನ್, ಶೇಂಗಾ ಹಾಗೂ ಮೆಣಸಿನಕಾಯಿ ಜಮೀನಿನಲ್ಲಿ ನೀರು ನಿಂತುಕೊಂಡಿದ್ದು. ಹೀಗೆ ಮಳೆ ಅಬ್ಬರಿಸಿದರೆ ಬೆಳೆ ಜಮೀನಿನಲ್ಲೇ ಕೊಳೆಯುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಇವತ್ತು ಜಿಲ್ಲೆಯಲ್ಲಿ ವರುಣನ ಆರ್ಭಟ ಸ್ಪಲ್ಪ ಕಡಿಮೆಯಾಗಿದೆ. ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಮಾಡಲು ರೈತರು ಕಾಯುತ್ತಿದ್ದರೆ. ಮತ್ತೊಂದೆಡೆ ಈಗಾಗಲೇ ಬಿತ್ತನೆ ಮಾಡಿದ ರೈತರು ಧಾರಾಕಾರ ಮಳೆಯಿಂದ ಬೆಳೆಗೆ ಹಾನಿಯಾಗಲಿದೆ ಎಂದು ಆತಂಕಗೊಂಡಿದ್ದಾರೆ.
ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮನೆಗಳು ಕುಸಿದು ಬಿದ್ದಿರುವ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ನಡೆದಿದೆ. ಲಕಮಾಪುರ ಗ್ರಾಮದ 3 ಮನೆಗಳು ಸಂಪೂರ್ಣ ಕುಸಿದಿವೆ. ಮಕ್ತುಂಬಿ ಕೋಟೂರ, ಫಾತಿಮಾ ನದಾಫ್, ಇಮಾಂಬಿ ಹೆಬ್ಬಳ್ಳಿ ಎನ್ನುವವರ ಮನೆಗಳಿಗೆ ಹಾನಿಯಾಗಿದೆ. ಮನೆ ಕುಸಿತದಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇನ್ನೂ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದಲ್ಲಿ ಅನಾರೋಗ್ಯಕ್ಕೀಡಾದ ಅಜ್ಜಿಯನ್ನು ಟ್ರ್ಯಾಕ್ಟರ್ನಲ್ಲಿ ಸಾಗಿಸಿದ ಘಟನೆ ನಡೆದಿದೆ. ಧಾರಾಕಾರ ಮಳೆಯಿಂದ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಸ್ವಸ್ಥಗೊಂಡಿದ್ದ ಅಜ್ಜಿಯನ್ನು ಟ್ರ್ಯಾಕ್ಟರ್ ನಲ್ಲಿ ಸೇತುವೆ ದಾಟಿಸಿದ್ದಾರೆ. ನೀರಿನ ಮಟ್ಟ ಹೆಚ್ಚಳದಿಂದಾಗಿ ಮೇಲ್ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಇದನ್ನೂ ಓದಿ:ಮೃತದೇಹ ಹೊತ್ತುಕೊಂಡು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನದಿ ದಾಟಿ ಗ್ರಾಮಸ್ಥರು..!