ಬಗರ್ ಹುಕುಂ ಭೂಮಿ ತೆರವು ವಿರೋಧಿಸಿ ಸೊರಬದಲ್ಲಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ - Madhu Bangarappa
🎬 Watch Now: Feature Video
ಶಿವಮೊಗ್ಗ : ಸೊರಬ ವಿಧಾನಸಭಾ ಕ್ಷೇತ್ರ ತಾಳಗುಪ್ಪ ಹೋಬಳಿಯ ಕೆರೆಹಳ್ಳಿ ಗ್ರಾಮದಲ್ಲಿ ಬಗರ್ ಹುಕುಂ ಭೂಮಿ ತೆರವು ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದೆ. ಸೊರಬ ಪಟ್ಟಣದ ರಂಗನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಧು ಬಂಗಾರಪ್ಪನವರು ಪ್ರತಿಭಟನೆಗೆ ಚಾಲನೆ ನೀಡಿದರು. ರಂಗನಾಥ ದೇವಾಲಯದಿಂದ ಶುರುವಾದ ಪ್ರತಿಭಟನೆ ಮೆರವಣಿಗೆಯಲ್ಲಿ ನೂರಾರು ಜನ ಭಾಗಿಯಾಗಿದ್ದರು. ಪ್ರತಿಭಟನಾ ಮೆರವಣಿಗೆಯು ರಂಗನಾಥ ದೇವಾಲಯದಿಂದ ಪೇಟೆ ಬೀದಿ, ಖಾಸಗಿ ಬಸ್ ನಿಲ್ದಾಣದ ಮೂಲಕ ಶಿಕಾರಿಪುರ ರಸ್ತೆಯಲ್ಲಿನ ತಹಶೀಲ್ದಾರ್ ಕಚೇರಿ ತಲುಪಿತು.
ಇನ್ನು ಪ್ರತಿಭಟನೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದದರು. ಬಿಜೆಪಿ ಸರ್ಕಾರ ಬಗರ್ ಹುಕುಂ ರೈತರ ಪರ ಇರುವುದಾಗಿ ಹೇಳುತ್ತ, ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ರೈತರನ್ನು ಬೀದಿ ಪಾಲು ಮಾಡುವುದು ಬಿಜೆಪಿ ಸರ್ಕಾರದ ಕೆಲಸವಾಗಿದೆ. ರೈತರ ಭೂಮಿಯನ್ನು ತೆರವು ಮಾಡಿ ಅವರಿಗೆ ಜೀವನವೇ ಇಲ್ಲದಂತೆ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಆದರೆ ನಾವು ಬಗರ್ ಹುಕುಂ ರೈತರ ಪರವಾಗಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಅತ್ತ ಕೋರ್ಟ್ ತೀರ್ಪು ಎಂದು ಜನಪ್ರತಿನಿಧಿಗಳು ಕೈಕಟ್ಟಿ ಕುಳಿತುಕೊಂಡಿದ್ದಾರೆ. ಈ ಮೂಲಕ ಬಗರ್ ಹುಕುಂ ರೈತರ ಮಾರಣಹೋಮಕ್ಕೆ ಸಜ್ಜಾಗಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ರೈತರ ವಿಚಾರದಲ್ಲಿ ಯಾರೂ ಸಹ ಕೈಕಟ್ಟಿ ಕುಳಿತುಕೊಳ್ಳಬಾರದು. ರೈತರ ನೆರವಿಗೆ ಬಾರದೆ ಹೋದಮೇಲೆ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಧು ಬಂಗಾರಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಸೇರಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ :ಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ