ಕಾಬೂಲ್: ಗಡಿ ದಾಟುವ ಸ್ಥಳಗಳಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಿ ಗಡಿ ಭದ್ರತಾ ಪಡೆಗಳ ನಡುವೆ ಭಾರೀ ಘರ್ಷಣೆ ಸಂಭವಿಸಿದ್ದು, 19 ಪಾಕಿಸ್ತಾನಿ ಸೈನಿಕರು ಮತ್ತು ಮೂವರು ಅಫ್ಘಾನಿಸ್ತಾನ ನಾಗರಿಕರು ಸೇರಿದಂತೆ ಒಟ್ಟು 22 ಜನ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಪೂರ್ವ ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ಈ ಘರ್ಷಣೆ ನಡೆಯುತ್ತಿದೆ.
ಖೋಸ್ಟ್ ಪ್ರಾಂತ್ಯದ ಅಲಿ ಶಿರ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನಾ ಪೋಸ್ಟ್‌ಗಳಿಗೆ ಬೆಂಕಿ ಹಚ್ಚಿರುವ ಅಫ್ಘಾನ್ ಗಡಿ ಪಡೆ, ಪಕ್ತಿಯಾ ಪ್ರಾಂತ್ಯದ ದಾಂಡ್-ಎ-ಪಟಾನ್ ಜಿಲ್ಲೆಯಲ್ಲಿ ಎರಡು ಪಾಕ್ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇನ್ನು ದಾಂಡ್-ಎ-ಪಟಾನ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೈನಿಕರು ಹಾರಿಸಿದ ಮೋರ್ಟಾರ್ ಶೆಲ್‌ಗಳಿಂದ ಮೂವರು ಅಫ್ಘಾನ್ ನಾಗರಿಕರು ಪ್ರಾಣ ಕಳೆದುಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ರಾತ್ರಿ ಅಫ್ಘಾನಿಸ್ತಾನದ ಬರ್ಮಾಲ್ ಜಿಲ್ಲೆಯ ಪಕ್ಟಿಕಾ ಪ್ರಾಂತ್ಯದ ಮೇಲೆ ಪಾಕಿಸ್ತಾನ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 51 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಉಭಯ ರಾಷ್ಟ್ರಗಳ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.