ಬೆಂಗಳೂರು : ಪಾರ್ಟಿ ಪ್ರಿಯರಿಗೆ ಹಾಟ್ ಸ್ಪಾಟ್ ಎನಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಆಚರಿಸುವವರಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಕೆಲ ಸೂಚನೆಗಳನ್ನು ನೀಡಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಅನುಸರಿಸಬೇಕಾದ ಹಾಗೂ ಉಲ್ಲಂಘಿಸಬಾರದ ಅಂಶಗಳ ಕುರಿತು ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಾರ್ವಜನಿಕರು ಮಾಡಬೇಕಿರುವ ಅಂಶಗಳು
- ಹೊಸ ವರ್ಷಾಚರಣೆಯನ್ನು ಶಾಂತಿಯುತವಾಗಿ ಆಚರಿಸುವುದು.
- ಕಾನೂನಿನನುಸಾರ ನಿಯಮಗಳನ್ನ ಪಾಲನೆ ಮಾಡಬೇಕು ಮತ್ತು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು
- ಸಾರ್ವಜನಿಕರು ಶಾಂತಿ ಮತ್ತು ಶಿಸ್ತು ಕಾಪಾಡಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸುವುದು
- ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮೋದಿಸಲ್ಪಟ್ಟ ಅಧಿಕೃತ ಸ್ಥಳಗಳಲ್ಲಿ ವರ್ಷಾಚರಣೆಯನ್ನ ಆಚರಿಸುವುದು
- ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ (112), ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಿಯೋಸ್ಕ್ ಅನ್ನು ಸಂಪರ್ಕಿಸುವುದು
- ವರ್ಷಾಚರಣೆ ಸಂದರ್ಭದಲ್ಲಿ ಅಕ್ಕಪಕ್ಕದವರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು
- ಹೆಚ್ಚು ಬೆಳಕಿರುವ ಪ್ರದೇಶಗಳಲ್ಲಿ ವರ್ಷಾಚರಣೆಯನ್ನು ಆಚರಿಸುವುದು
- ಸಾರ್ವಜನಿಕರು, ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಸುರಕ್ಷತೆ ಬಗ್ಗೆ ಗಮನಹರಿಸುವುದು
- ಸಾರ್ವಜನಿಕರು ಜನಸಂದಣಿಯಿರುವ ಸ್ಥಳಗಳಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು
- ಯಾವುದೇ ಅಹಿತಕರ ಘಟನೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡುವುದು
- ಸಾರ್ವಜನಿಕರು ತಮ್ಮ ಚಲನವಲನಗಳ ಬಗ್ಗೆ ಕುಟುಂಬಕ್ಕೆ ಆಗಿಂದಾಗ್ಗೆ ಮಾಹಿತಿ ನೀಡುತ್ತಿರಿ
- ವರ್ಷಾಚರಣೆ ಆಚರಿಸುವ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಬೆಲೆಬಾಳುವ ಆಭರಣಗಳನ್ನು ಧರಿಸದೇ ಇರುವುದು ಒಳಿತು. ಅಲ್ಲದೇ, ಮೊಬೈಲ್ ಫೋನ್ ಮತ್ತು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
- ಇತರೆ ಯಾವುದೇ ಧರ್ಮದವರ ಭಾವನೆಗಳಿಗೆ ಘಾಸಿಯಾಗದಂತೆ ವರ್ಷಾಚರಣೆಯನ್ನು ಆಚರಿಸಿ
- ಭದ್ರತಾ ಸಿಬ್ಬಂದಿಗಳಾದ ಪೊಲೀಸ್, ಗೃಹರಕ್ಷಕ ದಳದವರೊಂದಿಗೆ ಸಹಕರಿಸಿ
- ಆಟೋ ಮತ್ತು ಕ್ಯಾಬ್‌ಗಳಲ್ಲಿ ಪ್ರಯಾಣಿಸುವಾಗ ಅಧಿಕೃತವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು
- ಪೊಲೀಸರು ಸೂಚಿಸಿರುವ ರಸ್ತೆಗಳಲ್ಲಿಯೇ ಸಂಚರಿಸಿ
ಸಾರ್ವಜನಿಕರು ಮಾಡಬಾರದ ಅಂಶಗಳು
- ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡಬಾರದು
- ಪಟಾಕಿಗಳನ್ನು ಸಿಡಿಸಬಾರದು, ಪರಿಸರ ಮಾಲಿನ್ಯ ಉಂಟಾಗುವುದನ್ನು ತಪ್ಪಿಸತಕ್ಕದ್ದು
- ಅನಾವಶ್ಯಕವಾಗಿ ವಾಹನದ ಹಾರ್ನ್ ಮೊಳಗಿಸಬೇಡಿ ಹಾಗೂ ಪೀಪಿಯನ್ನು ಊದಬೇಡಿ
- ಅಪಾಯಕಾರಿಯಾಗಿ, ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವಂತಿಲ್ಲ
- ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೇ ಯಾವುದೇ ಸಮಾರಂಭಗಳನ್ನು ಆಯೋಜಿಸುವಂತಿಲ್ಲ.
- ವಯಸ್ಸಾದವರಿಗೆ, ಕಾಯಿಲೆ ಹೊಂದಿರುವವರಿಗೆ ತೊಂದರೆಯುಂಟಾಗುವಂತೆ ಸಮಾರಂಭಗಳನ್ನು ಆಯೋಜಿಸಬಾರದು.
- ಅವಧಿ ಮೀರಿ ಶಬ್ಧ ಮಾಲಿನ್ಯವನ್ನುಂಟು ಮಾಡುವುದು ಕಾನೂನುಬಾಹಿರವಾಗಿದೆ.
- ಪೊಲೀಸರು ಮತ್ತು ಸ್ಥಳೀಯ ಆಡಳಿತ ಇಲಾಖೆಗಳು ರೂಪಿಸುವ ಭದ್ರತಾ ಮಾರ್ಗದರ್ಶಿಗಳನ್ನು ಉಲ್ಲಂಘಿಸುವಂತಿಲ್ಲ
- ಸಾರ್ವಜನಿಕರು ಅನಾವಶ್ಯಕವಾಗಿ ಗೊಂದಲ ಮತ್ತು ದ್ವಂದ್ವಗಳಿಗೆ ಎಡೆ ಮಾಡಿಕೊಡಬಾರದು
- ನಿರ್ಬಂಧಿತ ಸ್ಥಳ / ಪ್ರದೇಶಗಳಿಗೆ ಪ್ರವೇಶಿಸಬಾರದು
- ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ಧೂಮಪಾನವನ್ನು ಮಾಡುವುದು ಕಾನೂನು ಬಾಹಿರ
- ಸಾರ್ವಜನಿಕರು ಇತರರಿಗೆ ತೊಂದರೆಯಾಗುವಂತೆ ನಡೆದುಕೊಳ್ಳಬಾರದು
- ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಯ್ದು ಹೋಗಲು ಪ್ರಯತ್ನಿಸಬೇಡಿ
- ತಮಾಷೆ ಮತ್ತು ಮೋಜಿಗಾಗಿ ತುರ್ತು ಸಹಾಯವಾಣಿಗಳಿಗೆ ಸಂಪರ್ಕಿಸಬಾರದು
- ರಸ್ತೆ ಮಧ್ಯೆ ಅನಾವಶ್ಯಕವಾಗಿ ನಿಲ್ಲುವುದು ಅಥವಾ ಗುಂಪುಗೂಡಬಾರದು
- ಸಮಾಜದ ಶಾಂತಿ ಕದಡುವಂತಹ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಾರದು
- ರಸ್ತೆ ದೀಪ ಸೇರಿದಂತೆ ಸರ್ಕಾರಿ ಸ್ವತ್ತುಗಳನ್ನು ಹಾನಿಗೊಳಿಸಬಾರದು
- ಪೋಷಕರು ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ನೀಡಬಾರದು
- ಅನಾವಶ್ಯಕವಾಗಿ ಸಾರ್ವಜನಿಕರೊಂದಿಗೆ ಹಾಗೂ ಅಪರಿಚಿತರೊಂದಿಗೆ ವಾದ, ವಾಗ್ವಾದಗಳಲ್ಲಿ ತೊಡಗಿಸಿಕೊಳ್ಳಬಾರದು
- ಸಾರ್ವಜನಿಕರು ಕೃತಕ / ವಿಕೃತ ಮುಖವಾಡಗಳನ್ನು ಧರಿಸಿ ಇತರರಿಗೆ ಕಿರಿ-ಕಿರಿ ಮಾಡಬಾರದು
ಕಾನೂನು ಸುವ್ಯವಸ್ಥಗೆ ಧಕ್ಕೆಯಾಗುವಂತಹ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದೆ ಸಂಭ್ರಮಾಚರಣೆ ನಡೆಸಿ, ಸುರಕ್ಷಿತವಾಗಿ ಮನೆಗಳಿಗೆ ತೆರಳುವಂತೆ ಆಯುಕ್ತರು ಕೋರಿದ್ದಾರೆ.
ಇದನ್ನೂ ಓದಿ : ಹೊಸವರ್ಷಕ್ಕೆ ಮೈಸೂರಿನತ್ತ ಪ್ರವಾಸಿಗರ ದಂಡು: ಹೋಟೆಲ್ ರೂಮ್ಗಳು ಭರ್ತಿ - TOURISTS FLOCK TO MYSURU