Watch video: ರಾವಿ ನದಿ ಪ್ರವಾಹದಲ್ಲಿ ಸಿಲುಕಿದ್ದ 150 ಜನರ ರಕ್ಷಣೆ - ಅಮೃತ್ಸರ
🎬 Watch Now: Feature Video
ಅಮೃತಸರ/ಜಲಂಧರ್: ರಾವಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ ತಮ್ಮ ಹೊಲಗಳಲ್ಲಿ ಕೆಲಸಕ್ಕೆ ಹೋಗಿ ಸಿಲುಕಿಕೊಂಡಿದ್ದ ಅಮೃತಸರ ಜಿಲ್ಲೆಯ ಘೋನೆವಾಲ್ ಗ್ರಾಮದ ಸುಮಾರು 150 ನಿವಾಸಿಗಳನ್ನು ಸೇನಾ ಸಿಬ್ಬಂದಿ ತಡರಾತ್ರಿ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಗ್ರಾಮದ ಸುಮಾರು 300 ಮಂದಿ ರಾವಿ ನದಿಯ ಇನ್ನೊಂದು ದಡದಲ್ಲಿರುವ ತಮ್ಮ ಹೊಲಗಳಲ್ಲಿ ಕೆಲಸಕ್ಕೆ ಹೋಗಿದ್ದರು.
ರೈತರು ಹೊಲಗಳಲ್ಲಿ ಸಿಲುಕಿಕೊಂಡಿರುವ ಮಾಹಿತಿ ಸಿಗುತ್ತಿದ್ದಂತೆ ಪಂಜಾಬ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಜಿಲ್ಲಾಡಳಿತವನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆಗಾಗಿ ಸೇನಾ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, 'ನಾನು ವಿಷಯ ತಿಳಿಸುತ್ತಿದ್ದಂತೆ ಸೇನೆ ತನ್ನ ಪಡೆಗಳನ್ನು ತ್ವರಿತವಾಗಿ ಸಜ್ಜುಗೊಳಿಸಿ, ಜನರ ರಕ್ಷಣೆಗಾಗಿ ನಾಲ್ಕು ದೋಣಿಗಳನ್ನು ಸ್ಥಳಕ್ಕೆ ಕಳುಹಿಸಿ ಕೊಟ್ಟಿತು. ಸೇನಾ ಸಿಬ್ಬಂದಿ ತಡರಾತ್ರಿಯವರೆಗೆ ರಕ್ಷಣಾ ಕಾರ್ಯ ನಡೆಸಿ, ಸರಿಸುಮಾರು 150 ಜನರನ್ನು ರಕ್ಷಿಸಿದ್ದಾರೆ. ಉಳಿದವರ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿವೆ' ಎಂದು ಅವರು ತಿಳಿಸಿದ್ದಾರೆ. ಪ್ರವಾಹದ ನೀರಿನಿಂದ ಪಾರಾದ ಗ್ರಾಮಸ್ಥರು ಸಂಪುಟ ಸಚಿವ ಎಸ್.ಕುಲದೀಪ್ ಸಿಂಗ್ ಧಲಿವಾಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಏತನ್ಮಧ್ಯೆ, ಜಲಂಧರ್ ಜಿಲ್ಲಾಡಳಿತವು ಗಿಡ್ಡರ್ಪಿಂಡಿ ಬಳಿಯ ಜಾನಿಯನ್ ಗ್ರಾಮದ ನಿವಾಸಿಗಳನ್ನು ರಕ್ಷಿಸಲು ಸೋಮವಾರ ರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸುಮಾರು 34 ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಸ್ಥಳಾಂತರಿಸಲು ಎನ್‌ಡಿಆರ್‌ಎಫ್ ತಂಡಗಳನ್ನು ಒತ್ತಾಯಿಸಲಾಗಿದೆ ಎಂದು ಜಲಂಧರ್ ಡಿಸಿ ವಿಶೇಷ್ ಸಾರಂಗಲ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಳೆಯ ರುದ್ರನರ್ತನ; 39ಕ್ಕೂ ಹೆಚ್ಚು ಮಂದಿ ಸಾವು, ಹಿಮಾಚಲದಲ್ಲಿ ಜಲಪ್ರಳಯ!