ಬೆಳಗಾವಿ : ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಪಹರಣ ಮಾಡಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಕಿಡ್ನಾಪ್ ಪ್ರಕರಣ ಸುಖಾಂತ್ಯವಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, "ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ಉದ್ಯಮಿ ಬಸವರಾಜ್ ಅಂಬಿ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಅವರ ಪತ್ತೆಗಾಗಿ ಘಟಪ್ರಭಾ ಪೊಲೀಸರು ಹಾಗೂ ನಿಪ್ಪಾಣಿ ಪೊಲೀಸರನ್ನೊಳಗೊಂಡ ತಂಡ ರಚಿಸಲಾಗಿತ್ತು. ನಮ್ಮ ಪೊಲೀಸರ ತಂಡ ದಾಳಿ ನಡೆಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದೆ. ಹಾಗೂ ಆರೋಪಿಗಳನ್ನು ಬಂಧಿಸಿದೆ" ಎಂದರು.
"ಆರೋಪಿಗಳಾದ ಈಶ್ವರ ರಾಮಗಾನಟ್ಟಿ, ಸಚಿನ್ ಕಾಂಬಳೆ, ರಮೇಶ್ ಕಾಂಬಳೆ, ರಾಘವೇಂದ್ರ ಮಾರಾಪುರನನ್ನು ಬಂಧಿಸಿದ್ದೇವೆ. ಪ್ರಕರಣದಲ್ಲಿ ಇನ್ನೂ ಕೆಲವು ಜನ ಭಾಗಿಯಾಗಿದ್ದಾರೆ ಎನ್ನುವ ಸಂದೇಹವಿದೆ. ಅವರನ್ನೂ ಸಹ ವಶಕ್ಕೆ ಪಡೆದು ಅವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ" ಎಂದರು.
"ಅಪಹರಣಕ್ಕೊಳಗಾದ ಬಸವರಾಜ್ ಅಂಬಿ ಬೇರೆ ಅಕ್ರಮ ಕೆಲಸದಲ್ಲಿ ಭಾಗಿಯಾಗಿದ್ದ. ಆತ ಅಕ್ರಮದಲ್ಲಿ ಭಾಗಿಯಾಗಿದ್ದು ಆರೋಪಿಗಳಿಗೆ ಗೊತ್ತಿತ್ತು. ಅವನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟರೆ ಆತ ಯಾರಿಗೂ ಹೇಳಲ್ಲ ಎಂಬ ನಂಬಿಕೆ ಆರೋಪಿಗಳಲ್ಲಿತ್ತು. ಹಾಗಾಗಿ, ಅಪಹರಣಕ್ಕೊಳಗಾದ ಬಸವರಾಜನ ಮಗನ ಬಳಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಬಸವರಾಜನ ಪತ್ನಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದರು. ದೂರು ಸ್ವೀಕರಿಸಿದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಡಾ. ಭೀಮಾಶಂಕರ ಗುಳೇದ್ ಪ್ರಕರಣವನ್ನು ವಿವರಿಸಿದರು.
ಕುಟುಂಬಕ್ಕೆ ಕರೆ ಮಾಡಿ ಬೆದರಿಸಿದ್ದ ಕಿಡ್ನಾಪರ್ಸ್ : ಫೆಬ್ರುವರಿ 14 ರಂದು ಉದ್ಯಮಿ ಬಸವರಾಜ್ ಅವರನ್ನು ಅಪಹರಿಸಿದ್ದ ಆರೋಪಿಗಳು ಬಳಿಕ ಅವರ ಪತ್ನಿಗೆ ಫೆ.18 ರಂದು ಫೋನ್ ಮಾಡಿ 5 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಅದರಂತೆ ಬಸವರಾಜ್ ಕಡೆಯವರು ಹಣ ತೆಗೆದುಕೊಂಡು ರಂದು ನಿಪ್ಪಾಣಿಗೆ ಹೋಗಿದ್ದರು. ಈ ವೇಳೆ ಮತ್ತೆ ಕರೆ ಮಾಡಿದ್ದ ಕಿಡ್ನಾಪರ್ಸ್, ಹಣ ತೆಗೆದುಕೊಂಡು ಒಬ್ಬರೇ ಬರುವುದು ಬಿಟ್ಟು ಎಲ್ಲ ಸಂಬಂಧಿಕರನ್ನು ಕರೆ ತಂದಿದ್ದೀರ. ಹೀಗಾಗಿ ನಿಮ್ಮ ಗಂಡನನ್ನು ಕೊಲೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದರಿಂದ ಆತಂಕಗೊಂಡ ಬಸವರಾಜ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಬೆಳಗಾವಿ ಉದ್ಯಮಿ ಕಿಡ್ನಾಪ್ ಮಾಡಿ ₹5 ಕೋಟಿಗೆ ಬೇಡಿಕೆ; ಎಸ್ಪಿ ಹೇಳಿದ್ದೇನು?