ಅಡಕೆಯಿಂದ ಮಂಗಳೂರಿಗೂ - ಗುಜರಾತಿಗೂ ನಿಕಟ ಸಂಪರ್ಕ: ಅಮಿತ್ ಶಾ - ಅಡಿಕೆಯಿಂದ ಮಂಗಳೂರಿಗು ಗುಜರಾತಿಗು ನಿಕಟ ಸಂಪರ್ಕ
🎬 Watch Now: Feature Video
ಪುತ್ತೂರು(ದಕ್ಷಿಣ ಕನ್ನಡ): ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಧ್ಯೇಯೋದ್ದೇಶ ಒಳಗೊಂಡಿರುವ ವಿವಿಧ ಆಯಾಮಗಳನ್ನು ಹೊಂದಿರುವ ಏಕರೂಪಿ ನಿಯಮಾಧಾರಿತ ಕೃಷಿ ಪತ್ತಿನ ಸಹಕಾರಿ ಸಂಘ (ಪಿಎಸಿಎಸ್) ಗಳನ್ನು ದೇಶದ ಪ್ರತೀ ಗ್ರಾಮ ಪಂಚಾಯತ್‍ಗಳಲ್ಲಿ ಮುಂದಿನ ಮೂರು ವರ್ಷಗಳೊಳಗೆ ಸ್ಥಾಪಿಸಲಾಗುವುದು ಎಂದು ಕೇಂದ್ರದ ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.
ಅವರು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭಗೊಳ್ಳಲಿರುವ ಈ ಪಿಎಸಿಎಸ್‍ಗಳಲ್ಲಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವಂತಹ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು. ಇವುಗಳು ಕೇಂದ್ರೀಕೃತ ವ್ಯವಸ್ಥೆಯಡಿ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದರು.
ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ: ದಕ್ಷಿಣ ಕನ್ನಡ ಜಿಲ್ಲೆ ಜಲ, ವಾಯು, ರಸ್ತೆ ಸಂಪರ್ಕ ಹೊಂದಿರುವಂತಹ ರಾಜ್ಯದ ಏಕೈಕ ಪಟ್ಟಣವಾಗಿದ್ದು, ವಾಣಿಜ್ಯ ವ್ಯವಹಾರಗಳಿಗೆ ಇದು ಬಹಳಷ್ಟು ಸಹಕಾರಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ಕಾಳುಮೆಣಸು, ಭತ್ತ, ರಬ್ಬರ್ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿನ ಅಡಕೆಗೂ ಗುಜರಾತಿಗೂ ನಿಕಟ ಬಾಂಧವ್ಯವಿದೆ. ಈ ನಿಟ್ಟಿನಲ್ಲಿ ವ್ಯಾಪಾರ ವ್ಯವಹಾರಗಳಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಮಂಗಳೂರು - ಬೆಂಗಳೂರು ಮಧ್ಯೆ ಸುಗಮ ಸಂಚಾರಕ್ಕಾಗಿ ಶಿರಾಡಿ ಘಾಟ್ ಪ್ರದೇಶದಲ್ಲಿ ಸುರಂಗ ಮಾರ್ಗದ ಯೋಜನೆ ಹಾಕಿಕೊಳ್ಳಲಾಗಿದೆ.
1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ನಾರಾಯಣ ಗುರು ವಿದ್ಯಾಲಯ ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಧನೆಗಳನ್ನು ಹಾಗೂ ಮಾಡಿಕೊಟ್ಟಿರುವ ಅನುಕೂಲಗಳನ್ನು ಹೇಳಿದರು.
ದೀನ್ ದಯಾಳ್ ಪ್ರೇರಣೆ: ಕ್ಯಾಂಪ್ಕೊದ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರ ದೊರಕಿದಾಗ ನಾನು ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೆ. ಆದರೆ, ಕ್ಯಾಂಪ್ಕೊ ಸಂಸ್ಥೆಯ ಸಾಧನೆ ನೋಡಿ ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ನಿಶ್ಚಯಿಸಿದೆ. ಇಂದು ದೀನ್ ದಯಾಳ್ ಉಪಾಧ್ಯಾಯರ ಪುಣ್ಯತಿಥಿಯೂ ಹೌದು. ಇವರ ಅವರ ವಿಚಾರಧಾರೆಗಳು ಸರಕಾರದ ಅಭಿವೃದ್ಧಿ-ಸಾಧನೆಗಳಿಗೆ ಪ್ರೇರಣೆಯಾಗಿದೆ ಎಂದು ಗುಣಗಾನ ಮಾಡಿದರು.
ಇದೇ ವೇಳೆ ಮಾತು ಮುಂದುವರಿಸಿದ ಅವರು, ಜನರಿಗೆ ಮೂಲಭೂತ ಸೌಕರ್ಯಗಳು, 5 ಲಕ್ಷದವರೆಗೆ ಆರೋಗ್ಯ ವಿಮೆ, ಉಚಿತ ಅಕ್ಕಿ ಇದೆಲ್ಲವೂ ದೀನ್ ದಯಾಳ್ ಅಂತ್ಯೋದಯ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವಂತಹ ಅಭಿವೃದ್ಧಿ ಯೋಜನೆಗಳಾಗಿವೆ. ಈ ನಿಟ್ಟಿನಲ್ಲಿ ಅವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಅಮಿತ್ ಶಾ ಹೇಳಿದರು.
ಅಮಿತ್ ಶಾ ಇಂದು ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಈ ಬಾರಿ ಬಾರಿ ಕರಾವಳಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ರಣತಂತ್ರ ಹೆಣೆಯಲಿದ್ದಾರೆ. ಈ ಸಂಬಂಧ ಅವರು ಇಂದು ಕರಾವಳಿಯಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ.
ಇದನ್ನೂ ಓದಿ: ಆಂಜನೇಯಗೆ ಬೆಳ್ಳಿಯ ನವರತ್ನಯುಕ್ತ ಗದೆ ಸಮರ್ಪಣೆ ಮಾಡಿದ ಅಮಿತ್ ಶಾ