Lunar Eclipse: ಚಂದ್ರ ಗ್ರಹಣದ ಹಿನ್ನೆಲೆ ನಂಜುಂಡೇಶ್ವರ ದರ್ಶನ ಪಡೆದ ಶಾಸಕ ಜಿ.ಟಿ. ದೇವೇಗೌಡ - ಶಾಸಕ ಜಿಟಿ ದೇವೇಗೌಡ
🎬 Watch Now: Feature Video
Published : Oct 28, 2023, 9:10 PM IST
ಮೈಸೂರು: ಹುಣ್ಣಿಮೆ ಹಾಗೂ ಚಂದ್ರ ಗ್ರಹಣದ ಹಿನ್ನೆಲೆ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಶಾಸಕ ಜಿ ಟಿ ದೇವೇಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂಜುಂಡನಿಗೆ ವಿಶೇಷ ಪೂಜೆ ಸಲ್ಲಿಸಿ, ಪಾರ್ವತಿದೇವಿ, ಗಣಪತಿ, ನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ಜನರು ಎದುರಿಸುತ್ತಿರುವ ಬರಗಾಲವನ್ನು ದೂರ ಮಾಡಿ, ನಂಜುಂಡೇಶ್ವರನು ಎಲ್ಲರಿಗೂ ಆರೋಗ್ಯ ನೀಡುವುದರ ಜೊತೆಗೆ ಮಳೆ, ಬೆಳೆಯನ್ನು ಸಮೃದ್ಧಿಯಾಗಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ'' ಎಂದು ತಿಳಿಸಿದರು.
''ಬಿಜೆಪಿಯೊಂದಿಗೆ ನಮ್ಮ ಪಕ್ಷ ಯಾವುದೇ ವಿಲೀನವಿಲ್ಲ, ಆದ್ರೆ ಮೈತ್ರಿಯಷ್ಟೇ. ಕಾಂಗ್ರೆಸ್ನವರು ಯಾವ ರೀತಿ 28 ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೋ ಹಾಗೆ ನಾವು ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮೈತ್ರಿಯಾಗಲು ಸರ್ವಾನುಮತದಿಂದ ನಮ್ಮ ಪಕ್ಷ ಬೆಂಬಲ ನೀಡುತ್ತಿದೆ'' ಎಂದು ಹೇಳಿದರು.
''ರಾಜ್ಯದಲ್ಲಿ ಲೋಕಸಭೆಗೆ ಇನ್ನೂ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಇದಕ್ಕೆ ಎರಡು ಪಕ್ಷದ ನಾಯಕರು ತೀರ್ಮಾನ ಮಾಡಿ ನಿರ್ಧಾರಕ್ಕೆ ಬರುತ್ತಾರೆ. ರೈತರು ಸಾಲದಿಂದ ಋಣ ಮುಕ್ತರಾಗಲಿ. ಮಳೆ, ಬೆಳೆಯಾಗಿ ಬರಗಾಲ ದೂರವಾದಲ್ಲಿ ನಾನು ಕೂಡ ನಂಜುಂಡೇಶ್ವರನಿಗೆ ತುಲಾಭಾರ ಮಾಡಿಸಿಕೊಳ್ಳುತ್ತೇನೆ. ನಂಜುಂಡನಿಗೆ ಹರಕೆ ಹೊತ್ತಿದ್ದೇನೆ'' ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ಆಣೆ ಮಾಡುವುದಾದರೆ ನಾವು ಸಿದ್ಧ: ಸಚಿವ ಎನ್ ಚಲುವರಾಯಸ್ವಾಮಿ