ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಆಗ್ರಹ: ಬೆಂಗಳೂರಲ್ಲಿ ಆಪ್ ಮುಖಂಡರು, ಕಾರ್ಯಕರ್ತರು ಪೊಲೀಸ್ ವಶಕ್ಕೆ - ಜಂಟಿ ಸದನ ಸಮಿತಿಯ ತನಿಖೆ
🎬 Watch Now: Feature Video
ಬೆಂಗಳೂರು: ಉದ್ಯಮಿ ಗೌತಮ್ ಅದಾನಿಗೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದ ಎದುರು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನೆ ಮಾಡದಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು. ಆಗಲೂ ಪ್ರತಿಭಟನೆಗೆ ಮುಂದಾದಾಗ ಆಪ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನ, ಕೆಎಸ್ಆರ್ಪಿ, ಬಿಎಂಟಿಸಿ ಬಸ್ಗಳನ್ನು ಕರೆಸಿ ಸ್ಥಳದಿಂದ ಕರೆದೊಯ್ದರು.
ಪ್ರತಿಭಟನೆಯ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, ನಮ್ಮೆಲ್ಲರಿಗೂ ದೇಶವೆಂದರೆ ತಾಯಿ. ತಾಯಿಯ ಸಂಪನ್ಮೂಲವನ್ನು ಬಿಜೆಪಿಯು ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದೆ. ನಮ್ಮ ದೇಶದ ಕಲ್ಲಿದ್ದಲು, ಗ್ಯಾಸ್, ವಿದ್ಯುತ್, ರಸ್ತೆ, ನೀರು, ವಿಮಾನ ನಿಲ್ದಾಣ, ಬಂದರು ಮುಂತಾದವುಗಳನ್ನೆಲ್ಲ ಅದಾನಿ ಪಾಲಾಗುವಂತೆ ಮಾಡಿದ್ದಾರೆ. ಇದರಿಂದಾಗಿ ದೇಶದಲ್ಲಿ ಆರ್ಥಿಕ ಆತಂಕ ಎದುರಾಗಿದೆ. ಇದು ಹೀಗೆಯೇ ಮುಂದುವರಿದರೆ, ಭಾರತ ಮಾತೆಗೆ ಜೈ ಎನ್ನುವ ಬದಲು ಅದಾನಿಗೆ ಜೈ ಎಂದು ಹೇಳಬೇಕೆಂದು ಅವರು ನಮಗೆ ಆದೇಶಿಸುವ ದಿನ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಇದರ ತನಿಖೆ ಮಾಡಿಸುವ ಬದಲು ಉದ್ಯಮಿಯ ಪರವಾಗಿ ನಿಂತಿದ್ದಾರೆ. ಅದಾನಿ ವಿರುದ್ಧದ ಎಲ್ಲ ಆರೋಪಗಳ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಓದಿ : ಗೋಡ್ಸೆ, ಸಾವರ್ಕರ್ ಬೆಂಬಲಿಗರಿಂದ ನಮಗೆ ಪಾಠ ಬೇಕಿಲ್ಲ: ಅಮಿತ್ ಶಾಗೆ ಸಿದ್ದರಾಮಯ್ಯ ಟಾಂಗ್