ಪಾದಚಾರಿಗಳಿಗೆ ಡಿಕ್ಕಿ ಹೊಡೆದ ವಾಹನ: ಮಗು ಸೇರಿ ಮೂವರು ಸಾವು - ಈಟಿವಿ ಭಾರತ ಕನ್ನಡ
🎬 Watch Now: Feature Video
ಇಡುಕ್ಕಿ (ಕೇರಳ): ಚಾಲಕನ ನಿಯಂತ್ರಣ ತಪ್ಪಿದ ಮಿನಿ ಪಾರ್ಸೆಲ್ ವಾಹನವೊಂದು ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಒಂದೂವರೆ ವರ್ಷದ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ ಸುಮಾರು 7.45ರ ಹೊತ್ತಿಗೆ ಇಲ್ಲಿನ ಮವಾಟ್ಟುಪುಳ-ತೊಡುಪುಳ ರಸ್ತೆಯ ವಝಕುಲಂ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕುಂಜರಕ್ಕಟ್ಟು ಪ್ರಜೇಶ್ ಪೌಲ್ (35), ಪ್ರಜೇಶ್ ಅವರ ಪುತ್ರಿ ಅಲ್ನಾ ( ಒಂದೂವರೆ ವರ್ಷ) ಮತ್ತು ಇಂಚಪ್ಲಕಲ್ ಮೇರಿ (65) ಎಂಬವರು ಮೃತಪಟ್ಟಿದ್ದಾರೆ. ಮೃತರು ಇಡುಕ್ಕಿಯ ಕೂವೆಲಿಪಾಡಿ ನಿವಾಸಿಗಳು ಎಂದು ಹೇಳಲಾಗಿದೆ.
ಮೃತ ಪ್ರಜೇಶ್ ವ್ಯಾಪಾರಿಯಾಗಿದ್ದು, ತನ್ನ ಮಗಳೊಂದಿಗೆ ಅಂಗಡಿಗೆ ಹೋಗುತ್ತಿದ್ದರು. ಇದೇ ರಸ್ತೆಯಲ್ಲಿ ಮೇರಿ ಅವರೂ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಆಗಮಿಸಿದ ವಾಹನ ಮೂವರಿಗೆ ಡಿಕ್ಕಿ ಹೊಡೆದಿದೆ. ಮೂವರೂ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ವಾಹನ ಚಾಲಕ ನಿದ್ರೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿರುವುದಾಗಿ ಹೇಳಲಾಗಿದೆ. ಅಪಘಾತದಲ್ಲಿ ಗಾಯಗೊಂಡ ವಾಹನದ ಚಾಲಕ ಎಲ್ಡೋ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಿಂದೆಯೂ ಇಲ್ಲಿ ಹಲವು ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗದಗ : ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ