ಅಂಧತ್ವ ಮೆಟ್ಟಿ ನಿಂತ ಬೆಳಗಾವಿ ಯುವಕ: ಸರಾಗವಾಗಿ ಕಂಪ್ಯೂಟರ್ನಲ್ಲೇ ಕೆಲಸ ಮಾಡುವ ವಿಶೇಷ ಚೇತನ - ಬೆಳಗಾವಿ ಮಹಾನಗರ ಪಾಲಿಕೆ
🎬 Watch Now: Feature Video
ಬೆಳಗಾವಿ: ನಿರಂತರ ಪರಿಶ್ರಮ, ಶ್ರದ್ಧೆ ಇದ್ದರೆ ಅಂಧತ್ವ ಯಾವತ್ತೂ ಅಡ್ಡಿ ಅಲ್ಲ. ಎಂತಹ ಸವಾಲು ಇದ್ದರೂ ಅಂದುಕೊಂಡಿದ್ದನ್ನು ಸಾಧಿಸಬಹುದು ಅನ್ನೋದಕ್ಕೆ ಬೆಳಗಾವಿಯ ಈ ಅಂಧ ಯುವಕನೇ ಸ್ಫೂರ್ತಿ. ಹೌದು, ಹೀಗೆ ಕಣ್ಣು ಕಾಣಿಸದಿದ್ದರೂ ಸರಾಗವಾಗಿ ಕಂಪ್ಯೂಟರ್ ಟೈಪಿಂಗ್ ಮಾಡುತ್ತಿರುವವರು ಕರದಂಟು ನಾಡು ಗೋಕಾಕಿನ ಸುಮಿತ್ ಮೋಟೆಕರ್. ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಂಧತ್ವಕ್ಕೆ ಸವಾಲು ಹಾಕಿ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ.
ಎಲ್ಲ ಅಂಗಾಂಗಗಳು ಸರಿ ಇದ್ದರೂ ಸಹ ಅದೇಷ್ಟೋ ಜನರಿಗೆ ಕಂಪ್ಯೂಟರ್ ನಿರ್ವಹಣೆ ಮಾಡಲು ಬರುವುದಿಲ್ಲ. ಆದರೆ, ಸುಮಿತ್ ತಮ್ಮ ಅಂಧತ್ವಕ್ಕೆ ಸವಾಲು ಹಾಕಿ, ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಕಂಪ್ಯೂಟರ್ ಮೇಲೆ ಪ್ರಭುತ್ವ ಸಾಧಿಸುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. ‘ನಾನ್ ಡೆಸ್ಕ್ ಟಾಪ್ ವಿಶುವಲ್ ಎಕ್ಸಲ್’ ಎಂಬ ಅಪ್ಲಿಕೇಶನ್ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಕಂಪ್ಯೂಟರ್ ಆನ್ ಮಾಡುವುದು, ಕಡತಗಳನ್ನು ತೆರೆಯುವುದು, ಯಾವ ಕಡತವನ್ನು ಎಡಿಟ್ ಮಾಡಬೇಕು ಎಂಬುದನ್ನು ಅಪ್ಲಿಕೇಶನ್ ಸಹಾಯದಿಂದಲೇ ಮಾಡುತ್ತಿದ್ದಾರೆ.
ಅದಷ್ಟೇ ಅಲ್ಲದೇ ಕಚೇರಿಯ ಪತ್ರಗಳನ್ನು ಟೈಪ್ ಮಾಡುವುದು, ಕಚೇರಿಯ ಇತರೆ ಆನ್‌ಲೈನ್ ಅಪ್‌ಡೇಟ್ ಕೆಲಸವನ್ನು ಲೀಲಾಜಾಲವಾಗಿ ಮಾಡುವುದು ಕೂಡ ಇದೆ ಸುಮಿತ್. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಸುಮಿತ್, 2021ರಲ್ಲಿ ಎಸ್‌ಡಿಎ ಆಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ‘ಕಂಪ್ಯೂಟರ್ ಇನ್ ಅಡ್ವಾನ್ಸ್ ಕೋರ್ಸ್’ ತರಬೇತಿಯಲ್ಲಿ ಕಂಪ್ಯೂಟರ್ ಆಪ್ಲಿಕೇಶನ್ ಬಗ್ಗೆ ತರಬೇತಿ ಕೂಡ ಪಡೆದಿದ್ದಾರೆ. ಒಟ್ಟಾರೆ ಈ ವಿಶೇಷ ಚೇತನ ವ್ಯಕ್ತಿ ವಿಶೇಷ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲೇ ಸೋರುತ್ತಿದೆ ಶಾಲೆ: ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವ ಪರಿಸ್ಥಿತಿ!