ಗೋಕರ್ಣ: ಪಿಂಡ ಪ್ರದಾನಕ್ಕೆ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿ ಸೇರಿ ಒಂದೇ ಕುಟುಂಬದ 7 ಮಂದಿ ರಕ್ಷಣೆ - ಗೋಕರ್ಣ ಪೊಲೀಸ್ ಠಾಣಾ
🎬 Watch Now: Feature Video
Published : Oct 10, 2023, 7:24 PM IST
ಕಾರವಾರ : ಪಿಂಡ ಬಿಡಲು ಸಮುದ್ರಕ್ಕೆ ತೆರಳಿದ್ದ ವ್ಯಕ್ತಿ ಹಾಗೂ ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಾಡುತ್ತಿದ್ದ ಒಂದೇ ಕುಟುಂಬದ ಏಳು ಮಂದಿ ಅಲೆಗೆ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಿಸಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಇಂದು ನಡೆದಿದೆ.
ಗೋಕರ್ಣದ ಮುಖ್ಯ ಕಡಲತೀರಕ್ಕೆ ಪ್ರವಾಸಕ್ಕೆ ಆಗಮಿಸಿದ ಹುಬ್ಬಳ್ಳಿ ಮೂಲದ ಕುಟುಂಬ, ಸಮುದ್ರದಲ್ಲಿ ಈಜುತ್ತಿದ್ದರು. ಜೀವ ರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದರೂ ಅವರ ಮಾತು ಲೆಕ್ಕಿಸದೆ ನೀರಿಗಿಳಿದು ಈಜಾಡತೊಡಗಿದ್ದರು. ಕೆಲಹೊತ್ತಿನ ಬಳಿಕ ಅಲೆಯ ಸುಳಿಗೆ ಸಿಲುಕಿ ಮುಳುಗುತ್ತಿದ್ದ 7 ಜನರು ಕೊಚ್ಚಿ ಹೋಗುತ್ತಿದ್ದಾಗ ಚೀರಾಡಿಕೊಂಡಿದ್ದು, ತಕ್ಷಣ ಕರ್ತವ್ಯ ನಿರತರಾಗಿದ್ದ ಜೀವ ರಕ್ಷಕ ಸಿಬ್ಬಂದಿ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ ರಕ್ಷಿಸಿದರು. ಹುಬ್ಬಳ್ಳಿ ಮೂಲದ ಪರಶುರಾಮ (44) ರುಕ್ಮಿಣಿ (38) ಧೀರಜ್ (14) ಅಕ್ಷರ (14) ಖುಷಿ (13) ದೀಪಿಕಾ (12) ನಂದ ಕಿಶೋರ್ (10) ಎಂದು ಗುರುತಿಸಲಾಗಿದೆ.
ಪಿಂಡ ಬಿಡಲು ತೆರಳಿ ನೀರು ಪಾಲಾಗಿದ್ದವ ಬಚಾವ್: ಇದೇ ಕಡಲತೀರದಲ್ಲಿ ಪಿಂಡ ಪ್ರದಾನ ಮಾಡುವ ಹುಬ್ಬಳ್ಳಿ ಮೂಲದ ವ್ಯಕ್ತಿಯೋರ್ವರು ಸಮುದ್ರ ಪಾಲಾಗಿದ್ದ ಘಟನೆ ಕೂಡ ನಡೆದಿದ್ದು, ಇವರನ್ನು ಕೂಡಾ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹುಬ್ಬಳ್ಳಿಯ ಎಲ್.ವಿ.ಪಾಟೀಲ್ ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪಿಂಡ ಪ್ರದಾನ ಮಾಡಲು ಬಂದಿದ್ದ ಇವರು ಸಮುದ್ರಕ್ಕಿಳಿದಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ರಕ್ಷಣೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿಯನ್ನು ಕೂಗಿಕೊಂಡಿದ್ದು, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವನನ್ನು ರಕ್ಷಣೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ : ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಿಸಿದ ಲೈಫ್‌ಗಾರ್ಡ್ ಸಿಬ್ಬಂದಿ