ನವೆಂಬರ್ನಲ್ಲಿ ಅನ್ಸಾರ್ ಹಾಗೂ ಆತನ ತಂದೆ ಮೂಗನೋರ್ವನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಠಾಣೆಗೆ ಬರಲು ಹೇಳಿದ್ದರೂ ಇವರು ಹೋಗಿರಲಿಲ್ಲ.ಮಂಗಳೂರು: ರೌಡಿಶೀಟರ್ ಒಬ್ಬನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲು ಮನೆಗೆ ಹೋಗಿದ್ದ ಎಎಸ್ಐ ಮೇಲೆಯೇ ತಲವಾರು ದಾಳಿ ಮಾಡಿ ಹಲ್ಲೆಗೈದ ಘಟನೆ ಕಿನ್ನಿಗೋಳಿ ಬಳಿಯ ಲಿಂಗಪ್ಪಯ್ಯ ಕಾಡಿನಲ್ಲಿ ನಡೆದಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಲಿಂಗಪ್ಪಯ್ಯ ಕಾಡು ನಿವಾಸಿಯಾದ ಅನ್ಸಾರ್ ಬಂಧಿತ ಆರೋಪಿ. ಈ ಸಂಬಂಧ ಅನ್ಸಾರ್ ಸಹಿತ ಆತನ ತಂದೆ ಸಾದಿಕ್, ತಾಯಿ ಜುಬೈದಾ ಹಾಗೂ ಮತ್ತೋರ್ವ ಮಹಿಳೆ ಮುಮ್ತಾಜ್ ಎಂಬವರ ಮೇಲೆ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದೆ. ನವೆಂಬರ್ನಲ್ಲಿ ಅನ್ಸಾರ್ ಹಾಗೂ ಆತನ ತಂದೆ ಮೂಗನೋರ್ವನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಠಾಣೆಗೆ ಬರಲು ಹೇಳಿದ್ದರೂ ಇವರು ಹೋಗಿರಲಿಲ್ಲ. ಆದ್ದರಿಂದ ಎಎಸ್ಐ ಅಶೋಕ್ ಹಾಗೂ ಸಿಬ್ಬಂದಿ ಸುರೇಶ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲು ಅವರ ಮನೆಗೆ ಹೋಗಿದ್ದರು. ಪೊಲೀಸರು ಬಂದಿರೋದನ್ನು ಕಂಡು ಆರೋಪಿ ಅನ್ಸಾರ್ ಮನೆಯೊಳಗೆ ಅವಿತುಕೊಂಡಿದ್ದ. ಈತ ಬಾಗಿಲು ಹಾಕಿಕೊಂಡಿರುವುದನ್ನು ಕಂಡು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿತ್ತು. ಇನ್ನೂ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಮನೆಯ ಬಾಗಿಲು ದೂಡಲಾಗಿತ್ತು. ಈ ಸಂದರ್ಭ ಒಳಗಿದ್ದ ಅನ್ಸಾರ್ ತಲವಾರು ಬೀಸಿ ದಾಳಿ ನಡೆಸಿದ್ದಾನೆ. ಇದರಿಂದ ಎಎಸ್ಐ ಅಶೋಕ್ ಹಾಗೂ ಸಿಬ್ಬಂದಿ ಸತೀಶ್ ಕೈಗೆ ಗಾಯಗಳಾಗಿವೆ. ತಕ್ಷಣ ಪೊಲೀಸರು ಅನ್ಸಾರ್ನನ್ನು ಬಂಧಿಸಿದ್ದಾರೆ.ದಾಳಿಗೊಳಗಾದ ಪೊಲೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಈ ಸಂಬಂಧ ರೌಡಿಶೀಟರ್ ಅನ್ಸಾರ್ ಹಾಗೂ ಆತನಿಗೆ ಸಹಕರಿಸಿದ ತಂದೆ ಸಾದಿಕ್, ತಾಯಿ ಜುಬೈದಾ ಹಾಗೂ ಮತ್ತೋರ್ವ ಮಹಿಳೆ ಮುಮ್ತಾಜ್ ಎಂಬುವರ ಮೇಲೆ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆಂದು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.