ನವದೆಹಲಿ: ಮಹಿಳೆಯರ ಮೆನೊಪಾಸ್ ಬಗ್ಗೆ ಸಾಕಷ್ಟು ಸಂಶೋಧನೆಗಳಾಗಿವೆ ಹಾಗೂ ಅದರ ಬಗ್ಗೆ ಸಾಕಷ್ಟು ಮಾಹಿತಿ ಇಂಟರ್ನೆಟ್ ಸೇರಿದಂತೆ ಇತರೆಡೆ ಲಭ್ಯವಿದೆ. ಆದರೆ ಪುರುಷರಿಗೆ ಮೆನೊಪಾಸ್ ಆಗುತ್ತಾ ಅಥವಾ ಇಲ್ಲವೇ ಎಂಬ ಬಗ್ಗೆ ಅಗತ್ಯವಿರುವಷ್ಟು ಮಾಹಿತಿ ಲಭ್ಯವಿಲ್ಲ. ಹಾಗಾದರೆ ಪುರುಷರ ಮೆನೊಪಾಸ್ ಅಥವಾ ಆ್ಯಂಡ್ರೊಪಾಸ್ ಎಂದರೇನು, ಇದರ ಲಕ್ಷಣಗಳೇನು, ಯಾವ ವಯಸ್ಸಿನಲ್ಲಿ ಇದು ಸಂಭವಿಸುತ್ತದೆ ಈ ಎಲ್ಲದರ ಬಗ್ಗೆ ಒಂದಿಷ್ಟು ತಿಳಿಯೋಣ ಬನ್ನಿ.
ಮಹಿಳೆಯರಲ್ಲಿ ಅಂಡಾಶಯವು ಸ್ಥಿರವಾದ ಜಾಗದಲ್ಲಿ ಇರುತ್ತದೆ ಎಂಬುದು ತಿಳಿದ ವಿಷಯ. ಅಂಡಾಶಯವು ವಯಸ್ಸಾದಂತೆ ಕುಗ್ಗುತ್ತಾ ಹೋಗಿ ಮೆನೊಪಾಸ್ ಘಟಿಸುತ್ತದೆ. ಪುರುಷರಿಗೆ ಮೆನೊಪಾಸ್ ಆಗುವುದಿಲ್ಲವಾದರೂ, ಟೆಸ್ಟೊಸ್ಟಿರಾನ್ ಹಾರ್ಮೋನ್ಗಳ ಬಿಡುಗಡೆ ಕಡಿಮೆಯಾದಂತೆ ಅವರಿಗೂ ಇಂಥದೇ ಒಂದು ಹಂತ ಬರುತ್ತದೆ ಎಂಬುದು ಮಾತ್ರ ಸತ್ಯ.
ಪುರುಷರಿಗೆ ವಯಸ್ಸಾದಂತೆ ಕೂದಲು ಬಿಳಿಯಾಗುವುದು, ಸ್ನಾಯುಗಳ ಬಲ ಕಡಿಮೆಯಾಗುವುದು.. ಹೀಗೆ ಹಲವಾರು ಬದಲಾವಣೆಗಳು ಕಾಣಿಸುತ್ತವೆ. ಟೆಸ್ಟೊಸ್ಟಿರಾನ್ ಹಾರ್ಮೋನ್ಗಳ ಪ್ರಮಾಣ ಕಡಿಮೆಯಾಗುವುದು ಪುರುಷರ ಜೀವನದ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟ ಬದಲಾವಣೆ ಎನ್ನಬಹುದು.
ಈ ವಿಷಯದಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯದ ಕಾರಣದಿಂದ ಇದರಲ್ಲಿ ಮಾತಾಡಲು ಅಂಥದ್ದೇನಿಲ್ಲ. ಮಹಿಳೆಯರಲ್ಲಿ ಹಾರ್ಮೋನ್ ಹಿಂತೆಗೆತ ತೀವ್ರವಾಗಿರುವಷ್ಟು ಪುರುಷರಲ್ಲಿ ತೀವ್ರವಾಗಿರುವುದಿಲ್ಲ. ಪುರುಷರಿಗೆ ಮೆನೊಪಾಸ್ ರೀತಿಯ ಹಂತ ಬಂದಾಗ, ಟೆಸ್ಟೊಸ್ಟಿರಾನ್ ಮಟ್ಟದಲ್ಲಿನ ಇಳಿಕೆ ಮಾತ್ರವಲ್ಲದೆ ಕಚೇರಿಯ ಒತ್ತಡ, ಮದುವೆಯ ಚಿಂತೆ, ಜೀವನ ನಿರ್ವಹಣೆ ಹಾಗೂ ಜೀವನ ಶೈಲಿ ಹೀಗೆ ಹಲವಾರು ವಿಷಯಗಳು ಅದಕ್ಕೆ ಕಾರಣವಾಗಿರುತ್ತವೆ.
ಆ್ಯಂಡ್ರೊಪಾಸ್ ಎಂದರೇನು?: ಟೆಸ್ಟೊಸ್ಟಿರಾನ್ ಮಟ್ಟದಲ್ಲಿ ಇಳಿಕೆಯಾಗುವುದನ್ನು ಆ್ಯಂಡ್ರೊಪಾಸ್ ಎನ್ನಲಾಗುತ್ತದೆ.
ಆ್ಯಂಡ್ರೊಪಾಸ್ ಲಕ್ಷಣಗಳೇನು?
- ಬುದ್ಧಿಮತ್ತೆ ಕಡಿಮೆಯಾಗುವುದು
- ಶಕ್ತಿ ಮತ್ತು ಚೈತನ್ಯ ಕಡಿಮೆಯಾಗುವುದು
- ತೂಕ ಹೆಚ್ಚಾಗುವುದು, ಸ್ನಾಯುಗಳು ಚಿಕ್ಕದಾಗುವುದು, ಬೊಜ್ಜು ಹೆಚ್ಚಾಗುವುದು
- ಮಂಕು ಕವಿದಿರುವುದು ಹಾಗೂ ಉತ್ಸಾಹವಿಲ್ಲದಿರುವುದು
- ಕೋಪ ಬರುವುದು
- ಮಾಂಸಖಂಡಗಳಲ್ಲಿ ನೋವು
- ಬೆವರುವುದು ಶರೀರದ ಮೇಲ್ಭಾಗ ಬಿಸಿಯಾಗುವುದು
- ಕೈ ಕಾಲುಗಳು ತಣ್ಣಗಾಗುವುದು
- ಲೈಂಗಿಕ ನಿರಾಸಕ್ತಿ
- ತೂಕ ಕಡಿಮೆಯಾಗುವುದು
ಆ್ಯಂಡ್ರೊಪಾಸ್ ಪತ್ತೆ ಮತ್ತು ಚಿಕಿತ್ಸೆ: ಮೇಲೆ ತಿಳಿಸಲಾದ ಲಕ್ಷಣಗಳು ನಿಮಗೆ ಕಾಣಿಸಿಕೊಂಡಲ್ಲಿ ವೈದ್ಯರನ್ನು ಭೇಟಿಯಾಗಿ. ವೈದ್ಯರು ನಿಮ್ಮ ಟೆಸ್ಟೊಸ್ಟಿರಾನ್ ಮಟ್ಟ ತಿಳಿಯಲು ರಕ್ತದ ಪರೀಕ್ಷೆ ಮಾಡಲು ಸೂಚಿಸಬಹುದು. ಒಂದು ವೇಳೆ ಟೆಸ್ಟೊಸ್ಟಿರಾನ್ ಮಟ್ಟ ಕಡಿಮೆ ಇದ್ದರೆ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ನಿಮಗೆ ಉಪಯುಕ್ತವಾಗಬಹುದು. ಇನ್ನು ಆರೋಗ್ಯಕರ ಆಹಾರ ಸೇವಿಸುವುದರೊಂದಿಗೆ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಬಹುದು.