ತೆಂಗಿನಕಾಯಿ ಎಣ್ಣೆಯ ಉಪಯೋಗದಿಂದ ಹತ್ತು ಹಲವು ಲಾಭಗಳಿವೆ. ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ. ಆಯುರ್ವೇದ ತಜ್ಞೆ ಡಾ. ಪ್ರಿಯಾಂಕಾ ಸಂಪತ್ ತೆಂಗಿನ ಕಾಯಿ ಎಣ್ಣೆಯ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.
ನೈಸರ್ಗಿಕ ಆರ್ದ್ರತೆ : ತೆಂಗಿನಕಾಯಿ ಎಣ್ಣೆ ಬಳಸುವುದರರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಸೋರಿಯಾಸಿಸ್, ಡರ್ಮಟಿಟಿಸ್ ಮತ್ತು ಎಕ್ಸಿಮಾ, ಸುಟ್ಟ ಚರ್ಮಕ್ಕೆ ಉತ್ತಮವಾಗಿದೆ. ತೆಂಗಿನಕಾಯಿ ಎಣ್ಣೆಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ.
ದಿನ ನಿತ್ಯ ಒಂದು ಚಿಟಿಕೆ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದರೆ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ. ಕೂದಲು ಬೆಳೆಯುವುದಕ್ಕೆ ತೆಂಗಿನ ಎಣ್ಣೆ ಅತ್ಯಂತ ಸಹಕಾರಿಯಾಗಿದೆ, ತೆಂಗಿನ ಎಣ್ಣೆ ನಿಯಮಿತವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ದೇಹದ ರಕ್ತ ಚಲನೆ ಹೆಚ್ಚಿಸುವುದರ ಜೊತೆಗೆ, ಕಳೆದುಹೋದ ಪೋಷಕಾಂಶಗಳನ್ನು ನೀಡುತ್ತದೆ.
ಬಾಯಿಯ ಆರೋಗ್ಯಕ್ಕೂ ಕೂಡ ಕೊಬ್ಬರಿ ಎಣ್ಣೆ ಉತ್ತಮ ಆಯುರ್ವೇದ ಔಷಧಿಯಾಗಿದೆ. ಬಾಯಿಗೆ ಎಣ್ಣೆ ಹಚ್ಚಿ ನಂತರ ಅದನ್ನು ಹೊರ ಹಾಕುವುದರಿಂದ ವಸಡಿನ ಸಮಸ್ಯೆ ತಪ್ಪಿಸಬಹುದು. ಆಯುರ್ವೇದದಲ್ಲಿ ಪಿತ್ತ ವಿರುದ್ಧಿ ಎಂದು ಕೊಬ್ಬರಿ ಎಣ್ಣೆ ಬಳಸಲಾಗುತ್ತದೆ, ಇದರಿಂದ ಅರ್ಥಿರಿಟಿಸ್ ಸಮಸ್ಯೆ ಹೋಗಲಾಡಿಸಬಹುದು ಎಂದು ಹಿಂದೂಜಾ ಹೆಲ್ತ್ ಕೇರ್ ಡಯಟಿಶಿನ್ ಇಂದ್ರಯಾಣಿ ಪವಾರ್ ತಿಳಿಸಿದ್ದಾರೆ.
ಅಡುಗೆಯಲ್ಲಿ ಕೊಬ್ಬರಿ ಎಣ್ಣೆ : ತೆಂಗಿನಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ, ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಕೊಬ್ಬರಿ ಎಣ್ಣೆಯನ್ನು ಹಲವು ಗಿಡ ಮೂಲಿಕ ಔಷಧಗಳಿಗಾಗಿಯೂ ಬಳಸಲಾಗುತ್ತದೆ.
ಕೊಬ್ಬರಿ ಎಣ್ಣೆಯನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಯಾವುದೇ ತೊಂದರೆಯಿಲ್ಲದೇ ಬಳಸಬಹುದಾಗಿದೆ. ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ತೆಂಗು-ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆ ಕೇಳಿದ್ದೀರಾ? ಬಹಳ ಜನ ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಎಣ್ಣೆಯನ್ನ ಅಡುಗೆಗೆ ಬಳಕೆ ಮಾಡೋಲ್ಲ. ಅವರಿಗೆ ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ ಪ್ರಚಾರದಿಂದ ಹಾಗೂ ತಮಗೇ ತಿಳಿಯದ ರುಚಿ ಹಾಗೂ ಪದಾರ್ಥದ ಬಗ್ಗೆ ಪಾಶ್ಚಾತ್ಯರು ನೀಡಿರುವ ವಿವರಗಳನ್ನು ಪಾಲಿಸುತ್ತಾರೆ.
ಆಹಾರ ತಯಾರಿಸಲು ಕೊಬ್ಬರಿ ಎಣ್ಣೆ ಬಳಸಿದರೆ, ಅದು ಹೆಚ್ಚಿನ ಶಾಖದ ತಾಪಮಾನದಲ್ಲಿಯೂ ಅಡುಗೆ ಸುರಕ್ಷಿತವಾಗಿ ಉಳಿಯಲು ಕಾರಣವಾಗುತ್ತದೆ. ಸಾಮಾನ್ಯ ಅಡುಗೆಯಲ್ಲಿ ಇತರ ತರಕಾರಿ ಜನ್ಯ ಎಣ್ಣೆಗಳಂತೆ, ಕೊಬ್ಬರಿ ಎಣ್ಣೆ ಹಾನಿಕಾರಕ ಉಪ ಉತ್ಪನ್ನಗಳನ್ನು ರೂಪಿಸುವುದಿಲ್ಲ.
ಕಪ್ಪು-ದಟ್ಟ ಕೂದಲಿಗೆ ಕೊಬ್ಬರಿ ಎಣ್ಣೆ: ಸ್ವಾಭಾವಿಕ ಅಂಶದ ಅದ್ಭುತ ಗುಣಗಳಿದ್ದರೂ, ಜನರಿಗೆ ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಕೇರಳದ ಜನರ ಸೌಂದರ್ಯ ರಕ್ಷಣೆಯ ಮುಖ್ಯ ವಿಧಾನ ಎಂದರೆ ಅದು ಆರ್ಯುವೇದ. ಇಲ್ಲಿಯ ಜನ ದಿನ ನಿತ್ಯದ ಸೌಂದರ್ಯ ಕಾಳಜಿಗೆ ಮನೆಯಲ್ಲಿ ಮಾಡಿದ ಹಾಗೂ ಸ್ವಾಭಾವಿಕ ಚಿಕಿತ್ಸೆಗಳತ್ತಲೇ ನಂಬಿಕೆಯಿಟ್ಟು ಅಳವಡಿಸಿಕೊಂಡಿದ್ದಾರೆ. ಕೇರಳದ ಮಹಿಳೆಯರು ತಮ್ಮ ತಲೆಕೂದಲಿಗೆ ಹೇರಳವಾಗಿ ಕೊಬ್ಬರಿ ಎಣ್ಣೆ ಹಚ್ಚುವುದರಿಂದ, ಅವರ ತಲೆಕೂದಲು ಕಪ್ಪಗೆ, ದಟ್ಟವಾಗಿ ಮಿಂಚುತ್ತದೆ.
ಅವರ ಆಹಾರದಲ್ಲಿ ಮುಖ್ಯವಾಗಿ ತೆಂಗು ಹಾಗೂ ಕೊಬ್ಬರಿ ಎಣ್ಣೆ ಇರುತ್ತದೆ. ತೆಂಗಿನ ಮಹತ್ವ ಹಾಗೂ ಆರೋಗ್ಯಕ್ಕೆ ಇದರ ಕೊಡುಗೆ ತೆಂಗಿನ ತಿರುಳಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಇವೆ. ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಹಾಗೂ ಬಿ6, ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಹಾಗೂ ರಂಜಕಗಳು ತೆಂಗಿನಲ್ಲಿ ತುಂಬಿವೆ. ಪ್ರತಿದಿನ ಎಣ್ಣೆ ಹಚ್ಚಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದರುವುದನ್ನು ನಿಯಂತ್ರಿಸುವುದರ ಜೊತೆಗೆ, ತಲೆಹೊಟ್ಟು ನಿವಾರಿಸುತ್ತದೆ.
ದೇಹದಲ್ಲಿಯ ಸ್ನಾಯುಗಳು ಹಾಗೂ ನರಗಳು ಚೆನ್ನಾಗಿ ಕೆಲಸ ಮಾಡುವಂತಾಗಲು, ಶರೀರದಲ್ಲಿ ಸಾಕಷ್ಟು ಜಲವಿರಬೇಕು. ಇದಕ್ಕೆ ಎಳನೀರು ನೆರವು ನೀಡುತ್ತದೆ. ಎಳನೀರಿನಲ್ಲಿ ಕ್ಯಾಲೋರಿಗಳು, ಪಿಷ್ಟ, ಸಕ್ಕರೆ ಕಡಿಮೆ ಇದ್ದು, ಅದು ಸಂಪೂರ್ಣ ಕೊಬ್ಬು ಮುಕ್ತವಾಗಿದೆ. ತೆಂಗಿನ ಒಳಗಿನ ಮೃದು ಅಂಶ, ಉತ್ಕರ್ಷಣದಿಂದಾದ ಜೀವಕೋಶ ನಾಶ ತಡೆದು, ಮೂಲಸ್ಥಿತಿಗೆ ಒಯ್ಯಲು ನೆರವು ನೀಡುತ್ತದೆ. ತೆಂಗಿನಕಾಯಿ-ಸಂಸ್ಕರಿಸದ, ಪರಿಶುದ್ಧಗೊಳಿಸದ ಕಚ್ಛಾ ಹಾಗೂ ಜಲಜನಕೀಕರಣಕ್ಕೊಳಗಾಗದ ಕೊಬ್ಬರಿ ಎಣ್ಣೆಯು ಬಳಕೆಗೆ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್
ಇದು ಅಧಿಕ ಕ್ಯಾಲೋರಿ ಇರುವ, ಕೊಲೆಸ್ಟರಾಲ್‍ನಿಂದ ತುಂಬಿರುವ, ಸಂತೃಪ್ತ ಕೊಬ್ಬುಗಳ ಉದ್ದ ಕೊಂಡಿಯಿಂದ ಭಿನ್ನವಾಗಿದೆ. ಇದು ಮಧ್ಯಮ ಕೊಂಡಿಯ ಕೊಬ್ಬಿನ ಆಮ್ಲದಲ್ಲಿ ಶ್ರೀಮಂತವಾಗಿದ್ದು, ದೇಹದ ಚಯಾಪಚಯ(ಮೆಟಾಬಾಲಿಸಂ) ಹೆಚ್ಚಿಸಲು ಸಹಾಯ ಮಾಡುತ್ತದಲ್ಲದೇ, ಕೊಬ್ಬು ನಾಶದಲ್ಲಿ ನೆರವು ನೀಡುತ್ತದೆ. ಇದು ವೇಗದ ಚಯಾಪಚಯ ಕ್ರಿಯೆಯಿಂದ, ನಿಮ್ಮ ಹೊಟ್ಟೆಗೆ ಅಂಟಿಕೊಳ್ಳುವ ಕೊಬ್ಬಾಗದೇ, ಶಕ್ತಿಯಾಗಿ ಸುಟ್ಟು ಹೋಗುತ್ತದೆ. ನಿಮ್ಮ ದೇಹವನ್ನು ನಿರ್ವಿಷೀಕರಿಸಿ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಸಮತೋಲ ಮಾಡುತ್ತದೆ.
ಅಡುಗೆ ಮನೆಯಲ್ಲಿ ಬಳಕೆ ಹೇಗೆ?: ತೆಂಗಿನತುರಿ ಒಣಗಿಸಿ ಪುಡಿ ಮಾಡಿದರೆ ಇದರಲ್ಲಿ ಪಿಷ್ಠ ಕಡಿಮೆ-ನಾರು ಹೆಚ್ಚು ಇರುತ್ತದೆ. ಹಾಗೂ ಅಂಟು ಕಡಿಮೆಯಿರುತ್ತದೆ. ನೇರವಾಗಿ, ಬೆಂಕಿಗೆ ತಗುಲಿಸದೇ ಬೇಯಿಸಲು, ಇದು ಅನುಕೂಲಕಾರಿ. ಚೂರು ಮಾಡಿದ ತೆಂಗಿನಕಾಯಿಯನ್ನು ನೀರಿನೊಂದಿಗೆ ಬೆರೆಸಿ ಹಿಂಡಿದಾಗ, ಬರುವ ತೆಂಗಿನ ಹಾಲನ್ನು ಅಡುಗೆಯಲ್ಲಿ ಬಳಸುತ್ತಾರೆ.
1) ಅವಿಯಲ್ ರೆಸಿ ಪಿ: ಬಾಳೇಕಾಯಿ, ಹುರುಳಿಕಾಯಿ, ಬದನೆಕಾಯಿ, ಸೌತೇಕಾಯಿ, ನುಗ್ಗೆಕಾಯಿ, ಪಡುವಲಕಾಯಿ, ಸುವರ್ಣಗೆಡ್ಡೆ, ನವಿಲುಕೋಸು, ಸೀಮೆಬದನೆ ತರಕಾರಿಗಳನ್ನು ಅರಿಶಿನ ಪುಡಿ ಹಾಕಿ ಕಡಿಮೆ ನೀರಿನಲ್ಲಿ ಕುದಿಸಿ. 6 ಹಸಿಮೆಣಸಿನಕಾಯಿ, 2 ಕಪ್ ತುರಿದ ತೆಂಗಿನಕಾಯಿ, 1 ಚಮಚ ಜೀರಿಗೆ ಇವುಗಳನ್ನು ಚೆನ್ನಾಗಿ ಅರೆದುಕೊಳ್ಳಿ. ತರಕಾರಿಗೆ ಇದೀಗ ಅರೆದ ಮಸಾಲೆ ಸೇರಿಸಿ, 5 ನಿಮಿಷ ಒಲೆಯ ಮೇಲಿಡಿ.
ನಿಮ್ಮ ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ಒಲೆಯ ಮೇಲಿಂದ ಕೆಳಗಿಳಿಸಿ. ಸಾಕಷ್ಟು ಗಟ್ಟಿ ಮೊಸರು ಹಾಕಿ ಕಲಕಿ. ಕೊಬ್ಬರಿ ಎಣ್ಣೆ ಒಗ್ಗರಣೆ ಮಾಡಿ, ಸಾಸಿವೆ -ಇಂಗು ಹಾಕಿ ಅವಿಯಲ್ ಮೇಲೆ ಹಾಕಿ. ಬೇಕೆನಿಸಿದರೆ ಇನ್ನಷ್ಟು ಹಸಿ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ ಬಡಿಸಿ, ಬಿಸಿಯಾಗಿದ್ದಾಗ ಅನ್ನದ ಜೊತೆ ಕೊಬ್ಬರಿ ಎಣ್ಣೆ ಸುವಾಸನೆ ಸವಿಯಲು ಬಲು ರುಚಿ.
2) ಚಿಪ್ಸ್ : ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಕೇರಳದ ಉದ್ದ ನೇಂದ್ರ ಬಾಳೆಕಾಯಿಯಿಂದ ಹೆರೆದ ಚೂರುಗಳನ್ನು ಹಾಕಿ ಉತ್ತಮ ಚಿಪ್ಸ್ ಸಿಗುತ್ತದೆ.
3) ಬಾಡಿಸಿದ ಹಾಗಲಕಾಯಿ : ಬೇಕಾಗುವ ಪದಾರ್ಥಗಳು- ಸಣ್ಣ ಸಣ್ಣ ಚೂರಾಗಿಸಿದ 2 ಕಪ್ ಹಾಗಲಕಾಯಿ, ಚಿಕ್ಕದಾಗಿ ಕತ್ತರಿಸಿದ ತೆಂಗಿನಕಾಯಿ ಚೂರುಗಳು, ಉದ್ದವಾಗಿ ಸೀಳಿರುವ ಹಸಿಮೆಣಸಿನಕಾಯಿ, 1 ಚಮಚ ಅಚ್ಚ ಮೆಣಸಿನ ಕಾಯಿ ಪುಡಿ, ಅರ್ಧ ಚಮಚ ಅರಿಶಿನ ಪುಡಿ, ಉಪ್ಪು ಹಾಗೂ ಕೊಬ್ಬರಿ ಎಣ್ಣೆ.
ಮಾಡುವ ವಿಧಾನ : ಹಾಗಲಕಾಯಿ ಚೂರುಗಳನ್ನು ಚೆನ್ನಾಗಿ ತೊಳೆದು, ನೀರು ಹೋಗುವಂತೆ ಚೆನ್ನಾಗಿ ಒರೆಸಿ. ಅಚ್ಚ ಮೆಣಸಿನಕಾಯಿಪುಡಿ, ಹಸಿರು ಮೆಣಸಿನಕಾಯಿ, ತೆಂಗಿನ ಚೂರುಗಳು, ಅರಿಶಿನ ಪುಡಿ ಹಾಗೂ ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಬೆರೆಯುವಂತೆ ಕೈಯಲ್ಲೇ ಬೆರೆಸಿ, ಒಂದೆಡೆ ಇಡಿ. ಸಣ್ಣ ಉರಿಯಲ್ಲಿ ಬಾಣಲೆಯೊಳಗೆ ಕೊಬ್ಬರಿ ಎಣ್ಣೆ ಹಾಕಿ, ಬಿಸಿ ಎಣ್ಣೆಯಲ್ಲಿ, ಮಿಶ್ರಣದಲ್ಲಿ ಒಂದಾಗಿರುವ ಹಾಗಲಕಾಯಿ ಚೂರುಗಳನ್ನು ಹುರಿಯಿರಿ. ಅವು ಕಂದು ಬಣ್ಣಕ್ಕೆ ತಿರುಗುವವರೆಗೆ ಗಮನಿಸಿ. ಅನ್ನದ ಜೊತೆಗೆ ಕಲಸಿಕೊಳ್ಳಲು ಇದು ಉತ್ತಮ ಜೋಡಿ.
4) ನೆಲ್ಲಿಕಾಯಿ ಉಪ್ಪಿನಕಾಯಿ : ಭಾರತೀಯ ನೆಲ್ಲಿಕಾಯಿಗಳ ಪರಿಣಾಮ ಎಲ್ಲರಿಗೂ ಗೊತ್ತಿದೆ. ಮಸಾಲೆ, ಉಪ್ಪು ಹಾಗೂ ಹುಳಿ ಮಿಶ್ರಿತ ಉಪ್ಪಿನಕಾಯಿ, ನಿಮ್ಮ ಬಾಯಲ್ಲಿ ನೀರು ತರಿಸಲಿದೆ.
ಬೇಕಾದ ಪದಾರ್ಥಗಳು : 2 ಕಪ್ ನೆಲ್ಲಿಕಾಯಿ, 3 ಚಮಚ ಕೊಬ್ಬರಿ ಎಣ್ಣೆ, 3 ಚಮಚ ಅಚ್ಚ ಮೆಣಸಿನಕಾಯಿಪುಡಿ, 3 ಚಮಚ ಕೊತ್ತಂಬರಿ ಬೀಜದ ಪುಡಿ, 1 ಚಮಚ ಇಂಗು, 1 ಚಮಚ ವಿನಿಗರ್, ರುಚಿಗೆ ಬೇಕಾದಷ್ಟು ಉಪ್ಪು.
ಮಾಡುವ ವಿಧಾನ : ಒಂದು ಅಗಲ ಬಾಣಲೆಯಲ್ಲಿ ನೀರು ಹಾಕಿ ನೆಲ್ಲಿಕಾಯಿಗಳನ್ನು ಚೆನ್ನಾಗಿ ಕುದಿಸಿ. ಬೆಂದ ನಂತರ ಅವುಗಳಲ್ಲಿಯ ಬೀಜ ತೆಗೆದು, ಒಂದೆಡೆ ನೆಲ್ಲಿ ಕಾಯಿಗಳನ್ನಿಡಿ. ಪ್ಯಾನ್‍ನಲ್ಲಿ ಕೊಬ್ಬರಿ ಎಣ್ಣೆ ಹಾಗೂ ಇದೀಗ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿರಿ. ಉಪ್ಪು ಹಾಕಿ, 3 ನಿಮಿಷ ಕಲಕುತ್ತಾ ಇರಿ. ಬೇಕಾದರೆ ವಿನಿಗರ್ ಹಾಕಿ ಕೆಳಗಿಳಿಸಿ.