ಭಾರತೀಯರು ಸೇವಿಸುವ ಆಹಾರದಲ್ಲಿ ಶೇ 60ಕ್ಕಿಂತ ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಇರುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಪೌಷ್ಟಿಕತಜ್ಞರ ಪ್ರಕಾರ, ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು ಶೇಕಡಾ 40 ಕ್ಕಿಂತ ಹೆಚ್ಚು ಇರಬಾರದು. ಇದಲ್ಲದೆ ಸರಾಸರಿ ಪ್ರೋಟೀನ್ ಸೇವನೆ 12 ಪ್ರತಿಶತದಷ್ಟಿದ್ದು, ಇದನ್ನು ಕನಿಷ್ಠ ಶೇ 40ಕ್ಕೆ ಹೆಚ್ಚಿಸಬೇಕು. ಕೊಬ್ಬು ಶೇ 20 ರಷ್ಟಿರಬೇಕು. ಎರಡು ತಿಂಗಳ ಕಾಲ ಈ ಲೆಕ್ಕಾಚಾರದಲ್ಲಿ ಸಮತೋಲಿತ ಆಹಾರವನ್ನು ಅನುಸರಿಸಿದರೆ, ದೇಹ ತಾನಾಗಿಯೇ ಮೊದಲಿನಂತೆ ಸಾಮಾನ್ಯ ಆರೋಗ್ಯ ಸ್ಥಿತಿಗೆ ಮರಳುತ್ತದೆ.
ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಇಷ್ಟದ ಆಹಾರವನ್ನು ನೋಡಿದ ಮೇಲಂತೂ ತಮ್ಮ ಹಸಿವನ್ನು ತಡೆದುಕೊಳ್ಳುವುದು ಭಾರಿ ಕಷ್ದ ಕೆಲಸ. ಅದನ್ನು ತಿನ್ನುವವರೆಗೆ ಸಮಾಧಾನವಿರುವುದಿಲ್ಲ. ಅತಿಯಾದ ಆಸೆಗೆ ಮಣಿದು ನಮ್ಮ ಇಷ್ಟದ ಆಹಾರವೆಂದು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ವೈದ್ಯಕೀಯ ತಜ್ಞರು. ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಅಂಶ ಹೆಚ್ಚಾಗುವ ಅಪಾಯವಿದೆ ಎಂಬುದು ವೈದ್ಯರ ಎಚ್ಚರಿಕೆಯ ಮಾತು.
ನಮ್ಮ ಇಷ್ಟದ ಆಹಾರವನ್ನೇ ನಿಗದಿತ ಸಮಯದ ಅಂತರದಲ್ಲಿ ಮಿತಿಯಾಗಿ ತಿನ್ನುವುದು ಉತ್ತಮ ಎನ್ನುತ್ತಾರೆ. ಚೆನ್ನೈನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಹಿರಿಯ ಸಲಹೆಗಾರ ಮೆಡಿಕಲ್ ಎಂಡೋಕ್ರಿನೋಲಾಜಿಸ್ಟ್ ಡಾ.ಪಿ.ಜಿ.ಸುಂದರರಾಮನ್. ಮಧುಮೇಹವನ್ನು ತಡೆಗಟ್ಟಲು ಯಾವ ಆಹಾರವನ್ನು ಸೇವಿಸಬೇಕು? ಮಧುಮೇಹಿಗಳು ತಮ್ಮ ಆಹಾರದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು? ಎಂಬುದನ್ನು ಡಾ.ಸುಂದರರಾಮನ್ ಅವರು 'ಈಟಿವಿ ಭಾರತ'ದೊಂದಿಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ.
ನಮ್ಮ ದೇಹಕ್ಕೆ ಸಾಮಾನ್ಯವಾಗಿ ಎರಡು ರೀತಿಯ ಪೋಷಕಾಂಶಗಳು ಬೇಕಾಗುತ್ತವೆ. ಒಂದು ಸೂಕ್ಷ್ಮ ಪೋಷಕಾಂಶಗಳು. ಇವುಗಳು ಸಣ್ಣ ಪ್ರಮಾಣದಲ್ಲಿ ಸಾಕು. ಎರಡನೆಯದು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಎಂದರೆ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ಗಳು ಮತ್ತು ಕೊಬ್ಬು. ಕಾರ್ಬೋಹೈಡ್ರೇಟ್‌ಗಳು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ತ್ವರಿತವಾಗಿ ಗ್ಲೂಕೋಸ್ ಅನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತವೆ.
ಆಹಾರ ಜೀರ್ಣಗೊಂಡು ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇದು ಜೀವಕೋಶಗಳಿಗೆ ಹೋಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆಯು ಸುಗಮವಾಗಿ ನಡೆಯಲು, ಒಬ್ಬ ಸಾಮಾನ್ಯ ವ್ಯಕ್ತಿಯು ದಿನಕ್ಕೆ ಮೂರು ಬಾರಿ ತಿನ್ನುವ ಅಭ್ಯಾಸವನ್ನು ಹೊಂದಿರಬೇಕು. ಇದಲ್ಲದೆ, ಈ ಊಟಗಳನ್ನು ನಿಗದಿತ ಸಮಯಗಳ ಅಂತರದಲ್ಲಿ ತಿನ್ನಬೇಕು. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಪ್ರತಿದಿನ ಒಂದೇ ಸಮಯದಲ್ಲಿ ತೆಗೆದುಕೊಳ್ಳಬೇಕು. ರಾತ್ರಿ 7.30ರ ಮೊದಲು ಊಟ ಮಾಡುವುದು ಆರೋಗ್ಯಕರ. ನೀವು ಸರಿಯಾದ ಸಮಯವನ್ನು ಅನುಸರಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.
ಇನ್ಸುಲಿನ್ ಏಕೆ ಕೆಲಸ ಮಾಡುವುದಿಲ್ಲ?: ನಾವು ಸೇವಿಸುವ ಆಹಾರದಿಂದ ಬಿಡುಗಡೆಯಾಗುವ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ತಲುಪಬೇಕು. ಇನ್ಸುಲಿನ್ ಆ ಕೆಲಸವನ್ನು ಮಾಡುತ್ತದೆ. ನೀವು ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದರೆ, ಗ್ಲೂಕೋಸ್‌ನ ಉತ್ಪಾದನೆ ಹೆಚ್ಚಾಗುತ್ತದೆ. ಆ ಹೆಚ್ಚಾದ ಗ್ಲೂಕೋಸ್ನ್ನು ಜೀವಕೋಶಗಳಿಗೆ ತ್ವರಿತವಾಗಿ ಕಳುಹಿಸಲು ಹೆಚ್ಚಿನ ಪ್ರಮಾಣದ ಇನ್ಸುಲಿನ್ ಬೇಕು. ಈ ಪ್ರಕ್ರಿಯೆ ನಡೆಯಲು ಸಾಕಷ್ಟು ಶ್ರಮ ಬೇಕಾಗುತ್ತದೆ.
ಗ್ಲೂಕೋಸ್ ದೀರ್ಘಕಾಲದವರೆಗೆ ರಕ್ತದಲ್ಲಿ ಉಳಿದರೆ ಮೇದೋಜ್ಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್ ಉತ್ಪಾದನೆಗೂ ತಡೆಯೊಡ್ಡುತ್ತದೆ. ಕ್ರಮೇಣ, ಇನ್ಸುಲಿನ್ ಕಾರ್ಯವು ಕಡಿಮೆಯಾಗಿ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇದುವೇ ಮಧುಮೇಹಕ್ಕೆ ಕಾರಣವಾಗುತ್ತದೆ. ದೇಹಕ್ಕೆ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ದೊರೆಯದಿದ್ದರೆ ವಿಟಮಿನ್ ಬಿ 12 ಕೊರತೆ ಉಂಟಾಗುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ತಾಜಾ ತರಕಾರಿಗಳು ಮತ್ತು ಎಲೆಗಳ ಸೊಪ್ಪನ್ನು ಹೆಚ್ಚು ಸೇವಿಸಬೇಕು.
ಧಾನ್ಯಗಳು ಸರಿಯಾದ ಆಯ್ಕೆ: 50ಶೇ ಕ್ಕಿಂತ ಹೆಚ್ಚು ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳು ದೇಹಕ್ಕೆ ಒಳ್ಳೆಯದಲ್ಲ. ಪಾಲಿಶ್ ಮಾಡಿದ ಅಕ್ಕಿ ಮತ್ತು ಗೋಧಿ ಸೇವನೆ ರಕ್ತಕ್ಕೆ ತ್ವರಿತವಾಗಿ ಗ್ಲುಕೋಸ್ ಬಿಡುಗಡೆ ಮಾಡುತ್ತವೆ. ಧಾನ್ಯಗಳು, ರಾಗಿ, ತರಕಾರಿಗಳು ಮತ್ತು ಹಣ್ಣುಗಳು ನಿಧಾನವಾಗಿ ರಕ್ತಕ್ಕೆ ಗ್ಲುಕೋಸ್ ರಕ್ತಕ್ಕೆ ಬಿಡುಗಡೆ ಮಾಡುತ್ತವೆ. ಇವುಗಳಲ್ಲಿ ನಾರಿನಂಶವೂ ಅಧಿಕವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.
ಮಧುಮೇಹಿಗಳಿಗೆ ಬೇಕು ದಿನಕ್ಕೆ ಆರು ಊಟ: ಜೀವಕೋಶಗಳಲ್ಲಿನ ಎಲ್ಲಾ ಚಯಾಪಚಯ ಕ್ರಿಯೆಯು ಪ್ರೋಟೀನ್‌ಗಳ ಸಹಾಯದಿಂದ ನಡೆಯುತ್ತದೆ. ಸ್ನಾಯುಗಳಿಗೆ ಪ್ರೋಟೀನ್ಗಳು ಬೇಕು. ಸ್ನಾಯು ಕೋಶಗಳಲ್ಲಿ ಗ್ಲುಕೋಸ್ ಶೇಖರಣೆಗೂ ಇವು ಉಪಯುಕ್ತವಾಗಿವೆ. ಸ್ನಾಯು-ಅಲ್ಲದ ಜೀವಕೋಶಗಳಿಗೆ ಗ್ಲುಕೋಸ್ ಅನ್ನು ಸಾಗಿಸಲು ಇನ್ಸುಲಿನ್ ಬೇಕು.
ಹಾಗಾಗಿ ಪ್ರತಿದಿನ ನಡೆಯುವುದನ್ನು ರೂಢಿಸಿಕೊಳ್ಳಿ. ನಿಯಮಿತ ವ್ಯಾಯಾಮ ಮತ್ತು ನಡಿಗೆಯ ಮೂಲಕ ಸ್ನಾಯುಗಳ ಬಲವನ್ನು ಹೆಚ್ಚಿಸುವ ಮೂಲಕ ಇನ್ಸುಲಿನ್ ಮೇಲಿನ ಹೊರೆ ಕಡಿಮೆ ಮಾಡಬಹುದು. ದೈಹಿಕ ಚಟುವಟಿಕೆಯ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಕಷ್ಟಪಟ್ಟು ದುಡಿಯುವುದು ಮತ್ತು ಮಿತವಾಗಿ ತಿನ್ನುವುದು ನಮ್ಮ ಧ್ಯೇಯವಾಗಬೇಕು. ನೀವು ಇನ್ಸುಲಿನ್ ಶಾಟ್ಸ್ ತೆಗೆದುಕೊಳ್ಳುತ್ತಿದ್ದರೆ, ನೀವು ದಿನಕ್ಕೆ ಮೂರು ಬಾರಿ ಲಘು ಊಟ ಮತ್ತು ದಿನಕ್ಕೆ ಮೂರು ಬಾರಿ ಮಧ್ಯಮ ಭಾರವಾದ ಊಟವನ್ನು ಸೇವಿಸುವುದು ಅಗತ್ಯ.
ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ: ತಿನ್ನುವ ಮೊದಲು ಮೂರು ಅಂಶಗಳನ್ನು ಪರಿಗಣಿಸಬೇಕು. ಮೊದಲನೆಯದಾಗಿ, ಇನ್ಸುಲಿನ್ ಸೂಕ್ಷ್ಮತೆ, ಅಂದರೆ, ನಾವು ಸೇವಿಸುವ ಆಹಾರವು ಮೇದೋಜ್ಜೀರಕ ಗ್ರಂಥಿಯನ್ನು ಇನ್ಸುಲಿನ್ ಬಿಡುಗಡೆ ಮಾಡಲು ಉತ್ತೇಜಿಸುತ್ತದೆಯೇ? ಎರಡನೆಯದಾಗಿ, ಇನ್ಸುಲಿನ್ ಸ್ರವಿಸುವಿಕೆ, ಅಂದರೆ, ಪ್ರಚೋದಿಸಿದರೆ ಎಷ್ಟು ಇನ್ಸುಲಿನ್ ಉತ್ಪತ್ತಿಯಾಗುತ್ತದೆ? ಮತ್ತು ಮೂರನೆಯದಾಗಿ, ಗ್ಲುಕೋಸ್ ವಿಲೇವಾರಿ ಸಮಯ, ಅಂದರೆ, ರಕ್ತಕ್ಕೆ ಬಿಡುಗಡೆಯಾಗುವ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ಎಷ್ಟು ಬೇಗನೆ ಕಳುಹಿಸುತ್ತದೆ. ಈ ಅಂಶಗಳನ್ನು ಪರಿಗಣಿಸಬೇಕು. ಎಲ್ಲರ ಆಹಾರ ಪದ್ಧತಿ ಎಲ್ಲರಿಗೂ ಸರಿಹೊಂದುವುದಿಲ್ಲ. ಆಹಾರದ ಸಂಯೋಜನೆ ವ್ಯಕ್ತಿಗೆ ಅನುಗುಣವಾಗಿ ಬದಲಾಗಬೇಕು. ಈ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ, ಜನರು ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು.
ಇದನ್ನೂ ಓದಿ: ಆಹಾರ ಸಚಿವಾಲಯದ ಕ್ಯಾಂಟೀನ್ ಮೆನುವಿನಲ್ಲಿ ರಾಗಿ ಪದಾರ್ಥ ಆಹಾರ ಇನ್ನು ಕಡ್ಡಾಯ