ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನ ನ್ಯೂ ಯೂನಿವರ್ಸಿಟಿ ಆಫ್ ಒಟಾಗೋದಲ್ಲಿನ ಸಂಶೋಧನೆಯು ಮಾನವರ ದೇಹದ ತೂಕಕ್ಕೆ ಹೋಲಿಕೆಯಾಗುವಂತೆ ತಮ್ಮ ಪ್ರತಿರಕ್ಷಣಾ ಆರೋಗ್ಯವನ್ನು ಹೆಚ್ಚಿಸಲು ಎಷ್ಟು ಹೆಚ್ಚುವರಿ ವಿಟಮಿನ್ ಸಿ ಸೇವಿಸಬೇಕು ಎನ್ನುವುದನ್ನು ಕಂಡುಕೊಂಡಿದೆ. ವಿಟಮಿನ್ ಸಿ ಉತ್ತಮ ಪ್ರತಿರಕ್ಷಣಾ ಕಾರ್ಯಕ್ಕೆ ಅಗತ್ಯ. ಇದು ಬಿಳಿ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತದೆ.
ಅಂತರರಾಷ್ಟ್ರೀಯ ಜರ್ನಲ್ ನ್ಯೂಟ್ರಿಯೆಂಟ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯ ತನ್ನ ಪ್ರತಿ 10 ಕೆಜಿ ಹೆಚ್ಚುವರಿ ತೂಕಕ್ಕೆ 10 ಮಿಲಿಗ್ರಾಂ ವಿಟಮಿನ್ ಸಿ ಯ ಹೆಚ್ಚುವರಿ ಅಗತ್ಯವಿರುತ್ತಂತೆ. ಇದು ಅವರ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿ ಎಂದು ಉಲ್ಲೇಖ ಮಾಡಲಾಗಿದೆ. ಹೆಚ್ಚಿನ ದೇಹದ ತೂಕವನ್ನು ಹೊಂದಿರುವವರಲ್ಲಿ ಕಡಿಮೆ ವಿಟಮಿನ್ ಸಿ ಮಟ್ಟ ಇರುವುದನ್ನು ಹಿಂದಿನ ಅಧ್ಯಯನಗಳು ಈಗಾಗಲೇ ಕಂಡುಕೊಂಡಿವೆ ಎಂದು ವಿಶ್ವವಿದ್ಯಾಲಯದ ರೋಗಶಾಸ್ತ್ರ ಮತ್ತು ಬಯೋಮೆಡಿಕಲ್ ಸೈನ್ಸ್ ವಿಭಾಗದ ಪ್ರಮುಖ ಲೇಖಕ ಅಸೋಸಿಯೇಟ್ ಪ್ರೊಫೆಸರ್ ಅನಿತ್ರಾ ಕಾರ್ರ್ ಹೇಳುತ್ತಾರೆ.
ವ್ಯಕ್ತಿಯ ದೇಹದ ತೂಕಕ್ಕೆ ಹೋಲಿಕೆ ಮಾಡಿಕೊಂಡು ಅವರ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಉದ್ದೇಶದಿಂದ ದಿನಕ್ಕೆ ಎಷ್ಟು ಹೆಚ್ಚುವರಿ ವಿಟಮಿನ್ ಸಿ ಅಗತ್ಯವಿದೆ ಎಂಬುದನ್ನು ಅಂದಾಜು ಮಾಡುವ ಮೊದಲ ಅಧ್ಯಯನ ಇದು ಎಂದು ಅವರು ತಿಳಿಸಿದ್ದಾರೆ.
ಸ್ಥೂಲಕಾಯವು ಕೋವಿಡ್‌ಗೆ ಅಪಾಯಕಾರಿ ಅಂಶವಾಗಿರುವುದರಿಂದ ಹೆಚ್ಚು ತೂಕ ಹೊಂದಿರುವ ಜನರು ಇಂಥ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಸಂಶೋಧನೆಗಳು ಸಮರ್ಥವಾಗಿ ಸಹಾಯ ಮಾಡಬಹುದೆಂದು ಕಾರ್ರ್ ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನದ ಫಲಿತಾಂಶಗಳಲ್ಲಿ ಕಂಡುಬಂದಂತೆ ಅಧಿಕ ತೂಕ ಹೊಂದುವಾಗ ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸುವುದು ಒಂದು ಸಂವೇದನಾಶೀಲ ಪ್ರತಿಕ್ರಿಯೆ ಎಂಬುದನ್ನು ಸೂಚಿಸುತ್ತದೆ.
ಕೊರೊನಾದ ಮತ್ತೊಂದು ಪ್ರಮುಖ ತೊಡಕೆಂದರೆ ಅದು ನ್ಯುಮೋನಿಯಾ. ನ್ಯುಮೋನಿಯಾ ಹೊಂದಿರುವ ರೋಗಿಗಳಲ್ಲಿ ವಿಟಮಿನ್ ಸಿ ಕಡಿಮೆಯಿರುತ್ತದೆ ಎಂದು ಹಲವಾರು ಸಂಶೋಧನೆಗಳು ಈಗಾಗಲೇ ಕಂಡುಕೊಂಡಿವೆ. ವಿಟಮಿನ್ ಸಿ ಹೆಚ್ಚಿರುವ ವ್ಯಕ್ತಿಗಳು ನ್ಯುಮೋನಿಯಾಗೆ ಬಲಿಯಾಗುವ ಸಾಧ್ಯತೆ ಕಡಿಮೆ ಮತ್ತು ಅದರ ತೀವ್ರತೆಯೂ ಕಡಿಮೆ ಇರುತ್ತದೆ ಎಂದು ತಿಳಿಸಿದ್ದಾರೆ.
ಯಾರು ಎಷ್ಟು ವಿಟಮಿನ್ ಸಿ ಪಡೆಯಬೇಕು?: 90 ಕೆಜಿ ತೂಕವಿರುವ ಯಾರಾದರೂ ದಿನಕ್ಕೆ 140mg ನ ಗುರಿಯನ್ನು ತಲುಪುವುದರೊಂದಿಗೆ ಹೆಚ್ಚುವರಿ 30 ಮಿಲಿಗ್ರಾಂ ವಿಟಮಿನ್ ಸಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧ್ಯಯನವು ಹೇಳಿದೆ. 120 ಕೆಜಿ ತೂಕವಿರುವ ವ್ಯಕ್ತಿ 150mg ನ ಗುರಿಯನ್ನು ತಲುಪಲು ದಿನಕ್ಕೆ ಕನಿಷ್ಠ 40 ಮಿಲಿಗ್ರಾಂ ವಿಟಮಿನ್ ಸಿ ಹೆಚ್ಚುವರಿ ಅಗತ್ಯ ಇದೆ ಎಂದು ತಿಳಿಸಿದೆ.
ದೈನಂದಿನ ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸಲು ಸುಲಭವಾದ ಮಾರ್ಗವೆಂದರೆ ವಿಟಮಿನ್ ಸಿ-ಭರಿತ ಆಹಾರಗಳಾದ ಹಣ್ಣುಗಳು ಮತ್ತು ತರಕಾರಿಗಳ ಬಳಕೆಯನ್ನು ಹೆಚ್ಚಿಸುವುದು ಎಂದು ಕಾರ್ರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲೇ ಪುಟ್ಟ ಮಗಳ ಶವ ಹೊತ್ತೊಯ್ದ ತಂದೆ; ತಿರುಪತಿಯಲ್ಲಿ ಕರುಳರಿಯುವ ಘಟನೆ