ವಾಷಿಂಗ್ಟನ್(ಯು.ಎಸ್) : ಸಾಂಕ್ರಾಮಿಕ ಸಮಯದಲ್ಲಿ ಜನ ಲಸಿಕೆ ಹಾಕಿಸಿಕೊಳ್ಳುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿದು ಬಂದಿದೆ. ಹೊಸ ಅಧ್ಯಯನವೊಂದು ಜನ ತಮ್ಮ ವೈದ್ಯರೊಂದಿಗೆ ಮಾತನಾಡಿ, ಅವರ ಅಭಿಪ್ರಾಯ ಪಡೆದ ಬಳಿಕ ಲಸಿಕೆ ಪಡೆಯುವ ಸಾಧ್ಯತೆ ಹೆಚ್ಚು ಎಂದು ಕಂಡು ಹಿಡಿದಿದೆ.
ಹೆಲ್ತ್ ಕಮ್ಯುನಿಕೇಷನ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು ಹಂದಿ ಜ್ವರದ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಆಧರಿಸಿವೆ. ಹಂದಿ ಜ್ವರವನ್ನು 2009ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.
ಹಂದಿ ಜ್ವರ ಎಂದೂ ಕರೆಯಲ್ಪಡುವ ಹೆಚ್1ಎನ್1 ವೈರಸ್‌ಗೆ ಲಸಿಕೆ ನೀಡುವ ಕುರಿತು ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಯುಎಸ್‌ನ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರು ರೋಗಿಗಳ ಸಮೀಕ್ಷೆ ನಡೆಸಿದರು.
ವೈದ್ಯರು-ರೋಗಿಗಳ ಸಂವಹನವು ಜನರಲ್ಲಿ ವಿಶ್ವಾಸ ಬೆಳೆಸಲು ಸಹಾಯ ಮಾಡಿತು ಮತ್ತು ಇದು ಹೆಚ್1ಎನ್1 ಲಸಿಕೆಯ ಕುರಿತು ಹೆಚ್ಚು ಸಕಾರಾತ್ಮಕ ಅಭಿಪ್ರಾಯಕ್ಕೂ ಕಾರಣವಾಯಿತು. ವೈದ್ಯರು ಸಾಮಾನ್ಯವಾಗಿ ವ್ಯಾಕ್ಸಿನೇಷನ್ ಕುರಿತು ಜನರ ನಕಾರಾತ್ಮಕ ಅಭಿಪ್ರಾಯ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ.