ಕೊರೊನಾ ಭೀತಿ ಒಂದೆಡೆಯಾದ್ರೆ ಇನ್ನೊಂದೆಡೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಆದರೆ ಶೀತ-ಕೆಮ್ಮನ್ನು ನಾವು ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು.
ಇದು ಮಳೆಗಾಲವಾಗಿದ್ದರಿಂದ ಕೆಮ್ಮು, ಶೀತ ಮತ್ತು ಜ್ವರ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಆದರೆ ದೇಶದಲ್ಲಿ ಕೋವಿಡ್-19 ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ರೋಗನಿರೋಧಕ ಶಕ್ತಿ ದುರ್ಬಲಗೊಂಡಾಗ ಕೊರೊನಾವೈರಸ್ ದಾಳಿ ನಡೆಸುವ ಸಾಧ್ಯತೆ ಹೆಚ್ಚು.
ಕೆಮ್ಮು, ಶೀತ, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ ನೋಡಿ.
- ಉಗುರು ಬೆಚ್ಚಗಿನ ನೀರು: ಗಂಟಲು ಕಿರಿಕಿರಿ ಅಥವಾ ನೋವು, ಮೂಗಿನ ಅಲರ್ಜಿ ಕಂಡು ಬಂದರೆ ನೀವು ಮಾಡಬೇಕಾದ ಮೊದಲ ಕೆಲಸ ತಣ್ಣೀರಿನಿಂದ ದೂರವಿರುವುದು. ಸ್ನಾನಕ್ಕಾಗಲಿ ಅಥವಾ ಕುಡಿಯಲು ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ. ಹಾಗೆಯೇ ನೀರಿನಲ್ಲಿ ಉಪ್ಪನ್ನು ಸೇರಿಸಿ ಸಾಧ್ಯವಾದಷ್ಟು ಬಾರಿ ಗಂಟಲನ್ನು ಮುಕ್ಕಳಿಸಿ, ಹೀಗೆ ಮಾಡುವುದರಿಂದ ಶೀತ ಉಂಟಾಗುವುದನ್ನು ತಡೆಯುತ್ತದೆ.
- ತುಳಸಿ ಬಳಕೆ: ತುಳಸಿಯ ಕೆಲವು ಎಲೆಗಳನ್ನು ಮ್ಯಾಶ್ ಮಾಡಿ ರಸ ಹೊರತೆಗೆಯಿರಿ. ದಿನಕ್ಕೆ ಎರಡು ಬಾರಿ ಒಂದು ಚಮಚ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
- ಆಡುಸೋಗೆ ಬಳಕೆ: ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ, ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು ಮಾಡುತ್ತಾರೆ. ಆಡುಸೋಗೆ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ, ರಸ ಹೊರತೆಗೆಯಿರಿ. ಒಂದು ಟೀ ಚಮಚ ರಸಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ ತಿನ್ನಿರಿ.
- (ವಿಭಿತಕಿ) ಬೆಲೆರಿಕ್ ಬಳಕೆ: 1 ಗ್ರಾಂ ಬೆಲೆರಿಕ್ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ. ದಿನಕ್ಕೆ 2-3 ಬಾರಿ ತೆಗೆದುಕೊಳ್ಳಿ.
- ಫಿಲಾಂತಸ್ ಅಮರಸ್: ಗಿಡಮೂಲಿಕೆ ಔಷಧಿಗಳಲ್ಲಿ ಬಳಸಿದ ಸಸ್ಯದ ಒಂದು ಜಾತಿಯಾಗಿದೆ . ಆಯುರ್ವೇದದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ, ಫಿಲಾಂತಸ್ ಅಮರಸ್ ಮತ್ತು ಫಿಲಾಂತಸ್ ನಿರುರಿಗಳಂತಹ ಜಾತಿಗಳನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳೆಂದು ಹೆಸರಿಸಲಾಗಿದೆ. ಫಿಲಾಂತಸ್ ಕುಲದ ಸಸ್ಯಗಳನ್ನು ಬಳಕೆ ಮಾಡುವುದರಿಂದ ಮೂತ್ರಕೋಶ, ಸೋಂಕುಗಳು, ಶೀತಗಳು, ಮಧುಮೇಹ, ಹೆಪಟೈಟಿಸ್ ಬಿ, ಹುಣ್ಣುಗಳುಮೂತ್ರದ ಸೋಂಕುಗಳನ್ನು ತಡೆಗಟ್ಟುತ್ತದೆ. ಫಿಲಾಂತಸ್ ಅಮರಸ್ ತಾಜಾ ಗಿಡಮೂಲಿಕೆಯನ್ನು ತೆಗೆದುಕೊಂಡು ರಸ ಹೊರತೆಗೆದು ದಿನಕ್ಕೆ ಎರಡು ಬಾರಿ 2-4 ಚಮಚ ತೆಗೆದುಕೊಳ್ಳಿ.
ಒಟ್ಟಿನಲ್ಲಿ ಕೆಮ್ಮು ತಾತ್ಕಾಲಿಕ ಸಮಸ್ಯೆಯಾಗಿದ್ದು, ಇದು ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ.