ವಾಷಿಂಗ್ಟನ್: ಕೋವಿಡ್ ಉಪಶಮನಕ್ಕೆ ವೈದ್ಯರು ಶಿಫಾರಸು ಮಾಡಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯೂ) ಮಾತ್ರೆಯು 17 ಸಾವಿರ ಸಾವಿನೊಂದಿಗೆ ಸಂಬಂಧ ಹೊಂದಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಫ್ರೆಂಚ್ ಸಂಶೋಧಕರು 6 ದೇಶದಲ್ಲಿ ಸುಮಾರು 17 ಸಾವಿರ ಜನರ ಸಾವಿನೊಂದಿಗೆ ಈ ಔಷಧ ಸಂಬಂಧ ಹೊಂದಿರುವುದನ್ನು ಕಂಡುಹಿಡಿದಿದ್ದಾರೆ. ಕೋವಿಡ್ ಮೊದಲ ಅಲೆಯ ವೇಳೆ ಮಾರ್ಚ್ನಿಂದ ಜುಲೈ 2020ರವರೆಗೆ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾದ ರೋಗಿಗಳಿಗೆ ವೈದ್ಯರು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಶಿಫಾರಸು ಮಾಡಿದ್ದರು ಎಂದು ವರದಿ ಹೇಳಿದೆ.
ಕೋವಿಡ್ ಸಾಂಕ್ರಾಮಿಕತೆ ಸಮಯದಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಮೆರಿಕ ಜನರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯೂ), ಮಲೇರಿಯಾ ವಿರೋಧಿ ಔಷಧ ಸಂಧಿವಾತ ಮತ್ತು ಲೂಪಸ್ ಶಮನಕ್ಕೆ ನೀಡುವ ರುಮಟಾಯ್ಡ್ ಬಳಕೆ ಮಾಡುವಂತೆ ಕರೆ ನೀಡಿದ್ದರು. ಅಲ್ಲದೇ ಇದನ್ನು ಅವರು 'ಪವಾಡದ ಔಷಧ' ಎಂದೂ ಬಣ್ಣಿಸಿದ್ದರು.
ಬಯೋಮೆಡಿಸಿನ್ ಮತ್ತು ಫಾರ್ಮಾಕೊಥೆರಪಿ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ ಸಂಶೋಧನೆಯಲ್ಲಿ, ಈ ಔಷಧಗಳನ್ನು ತೆಗೆದುಕೊಂಡ ಪರಿಣಾಮ ಹೃದಯದ ಆರ್ಹೆತ್ಮಿಯಾ ಮತ್ತು ಸ್ನಾಯು ದೌರ್ಬಲ್ಯದಂತಹ ಅಡ್ಡ ಪರಿಣಾಮ ಉಂಟಾಗಿದ್ದು, ಇದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎಂದು ವಿವರಿಸಿದೆ.
ಈ ಅಧ್ಯಯನವನ್ನು ಅಮೆರಿಕ, ಟರ್ಕಿ, ಬೆಲ್ಜಿಯಂ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿಯಲ್ಲಿ ನಡೆಸಲಾಗಿದೆ ಎಂದು ನ್ಯೂಸ್ವೀಕ್ ವರದಿ ಮಾಡಿದೆ. ಈ ಔಷಧಿಯಿಂದ ಅಮೆರಿಕದಲ್ಲಿ 12,739, ಸ್ಪೇನ್ನಲ್ಲಿ 1,895, ಇಟಲಿಯಲ್ಲಿ 1,822, ಬೆಲ್ಜೀಯಂನಲ್ಲಿ 240, ಫ್ರಾನ್ಸ್ನಲ್ಲಿ 199 ಮತ್ತು ಟರ್ಕಿಯಲ್ಲಿ 95 ಸಾವು ಸಂಭವಿಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾವಿನ ಸಂಖ್ಯೆ ಇನ್ನೂ ಅಧಿಕವಾಗಿರಬಹುದು. ಈ ಸಂಶೋಧನೆಯನ್ನು ಕೇವಲ 2020 ಮಾರ್ಚ್ನಿಂದ ಜುಲೈನಲ್ಲಿ ಕೇವಲ 6 ದೇಶದಲ್ಲಿ ನಡೆಸಲಾಗಿದೆ. ಅಧ್ಯಯನಕ್ಕೆ ವಿಜ್ಞಾನಿಗಳು ಅನೇಕ ಮಾದರಿ ವಿಶ್ಲೇಷಣೆ ಮಾಡಿದ್ದಾರೆ. ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲೀಕರಣ, ಪತ್ತೆಯಿಂದ ಔಷಧಗಳಿಂದಾಗಿರುವ ಅಪಾಯಗಳವರೆಗೆ ವಿಶ್ಲೇಷಣೆ ನಡೆಸಲಾಗಿದೆ.
ಕೋವಿಡ್ ಆರಂಭದದಲ್ಲಿ ಸೂಕ್ತ ಚಿಕಿತ್ಸೆ ಇಲ್ಲದ ಕಾರಣ ಮಾರಣಾಂತಿಕ ಸೋಂಕಿಗೆ ಎಚ್ಸಿಕ್ಯೂ ಪರಿಣಾಮಕಾರಿ ಎಂದು ವೈದ್ಯರು ಸಲಹೆ ನೀಡಿದ್ದರು. 2020ರ ಮಾರ್ಚ್ 28ರಂದು ಅಮೆರಿಕದ ಎಫ್ಡಿಎ ತುರ್ತು ಬಳಕೆಗೆ ಅನುಮೋದಿಸಿತ್ತು. ಇದೇ ವೇಳೆ ಕ್ಲಿನಿಕಲ್ ಟ್ರಯಲ್ಗಳೂ ನಡೆದಿದ್ದವು.
ಜೂನ್ 2020ರಲ್ಲಿ ಎಫ್ಡಿಎ ಈ ತುರ್ತು ಔಷಧಗಳನ್ನು ಹಿಂಪಡೆಯಿತು. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಸೇರಿದಂತೆ ಹಲವಾರು ಅಧ್ಯಯನಗಳು ಎಚ್ಸಿಕ್ಯೂನಿಂದ ಯಾವುದೇ ಪ್ರಯೋಜನವಿಲ್ಲ. ಇದು ಕೋವಿಡ್ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಎಫ್ಡಿಎ ಈ ಔಷಧವನ್ನು ತುರ್ತು ಬಳಕೆಯಿಂದ ಜೂನ್ 15, 2020ರಂದು ಹಿಂಪಡೆಯಿತು. (ಐಎಎನ್ಎಸ್)
ಇದನ್ನೂ ಓದಿ: ಜೆಎನ್.1 ರೂಪಾಂತರಿಯು ಗಂಭೀರ ವಿಕಸನದ ವೈರಸ್ ಎಂದ ತಜ್ಞರು