ವಾಷಿಂಗ್ಟನ್: ನವಜಾತ ಶಿಶುಗಳನ್ನು ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ)ಯಿಂದ ರಕ್ಷಣೆ ಮಾಡುವ ಮೊದಲ ಲಸಿಕೆಗೆ ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಅನುಮೋದನೆ ನೀಡಿದೆ ಎಂದು ಅಂತಾರಾಷ್ಟ್ರೀಯ ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಈ ಲಸಿಕೆಯನ್ನು ಫೈಜರ್ ತಯಾರಿಸಿದ್ದು, ಕಡೆಯ ಹಂತದ ಗರ್ಭಾವಧಿಯಲ್ಲಿ ತಾಯಿಗೆ ಈ ಲಸಿಕೆಯನ್ನು ನೀಡುವ ಮೂಲಕ ಮಗುವನ್ನು ಹುಟ್ಟಿನ ಮೊದಲ ಆರು ತಿಂಗಳ ಕಾಲ ಈ ಸೋಂಕಿನಿಂದ ರಕ್ಷಿಸಬಹುದಾಗಿದೆ.
ಈ ಲಸಿಕೆ ಪ್ರಯೋಗದ ವೇಳೆ 7 ಸಾವಿರ ಗರ್ಭಿಣಿಯರಿಗೆ ಈ ಲಸಿಕೆ ನೀಡಲಾಗಿದೆ. ಈ ಲಸಿಕೆಗೆ ಅಬ್ರಿಸ್ಟೊ ಎಂದು ಹೆಸರಿಡಲಾಗಿದೆ. ಈ ಲಸಿಕೆಯು ನವಜಾತ ಶಿಶುಗಳು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ತಪ್ಪಿಸುತ್ತದೆ.
ಆರ್‌ಎಸ್‌ವಿ ಎಂಬುದು ಸಾಮಾನ್ಯ ಅನಾರೋಗ್ಯವಾಗಿದ್ದು, ನವಜಾತ ಶಿಶುಗಳನ್ನು ಪ್ರತಿವರ್ಷ ಆಸ್ಪತ್ರೆಗೆ ದಾಖಲಾಗುವಂತೆ ಮಾಡುವ ಪ್ರಮುಖ ಸಮಸ್ಯೆಯಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಶಿಶುಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಕಡೆಯ ಆರ್‌ಎಸ್‌ವಿ ಸೀಸನ್ ದೀರ್ಘವಾಗಿದ್ದು, ಸಾಮಾನ್ಯಕ್ಕಿಂತ ಹೆಚ್ಚು ಗಂಭೀರವಾಗಿ ಇರುತ್ತದೆ.
ಎಫ್ಡಿಎ ಕೇಂದ್ರ ನಿರ್ದೇಶಕರಾದ ಪೀಟರ್ ಮಾರ್ಕ್ ಈ ಲಸಿಕೆ ಕುರಿತು ಮಾತನಾಡಿದ್ದು, ಆರ್‌ಎಸ್‌ವಿ ಎಂಬುದು ಮಕ್ಕಳಲ್ಲಿ ಕಾಡುವ ಸಾಮಾನ್ಯ ಅನಾರೋಗ್ಯವಾಗಿದೆ. ನವಜಾತ ಶಿಶುಗಳ ಇದರ ಗಂಭೀರ ಅಪಾಯಕ್ಕೆ ಒಳಗಾಗುವಂತೆ ಮಾಡುತ್ತದೆ. ಇದರಿಂದ ಅವರು ಆಸ್ಪತ್ರೆಗೆ ದಾಖಲಾಗುವ ಸಂಭವ ಹೆಚ್ಚಿರುತ್ತದೆ.
ಎಫ್ಡಿಎ ನೀಡಿರುವ ಈ ಅನುಮೋದನೆಯಿಂದ ವೈದ್ಯರು ಇದೀಗ ಜೀವಕ್ಕೆ ಅಪಾಯ ತರುವ ಇಂತಹ ರೋಗಗಳಿಂದ ನವಜಾತ ಶಿಶುಗಳನ್ನು ರಕ್ಷಿಸಲು ಗರ್ಭಿಣಿಯರಿಗೆ ಲಸಿಕೆ ಪಡೆಯಲು ಸಾಧ್ಯವಾಗುವಂತೆ ಮಾಡಲಾಗಿದೆ ಎಂದು ಅಮೆರಿಕದ ಪ್ರಮುಖ ದೈನಿಕ ವರದಿ ಮಾಡಿದೆ. ಆರ್‌ಎಸ್‌ವಿ ವಿರುದ್ಧ ರಕ್ಷಣೆ ಮಾಡುವ ಅನೇಕ ಮಾರ್ಗಗಳಿವೆ. ಇತ್ತೀಚಿಗೆ ಮಗು ಜನನವಾದ ಬಳಿಕ ತಕ್ಷಣಕ್ಕೆ ಅದಕ್ಕೆ ಆ್ಯಂಟಿಬಾಡಿ ಇಂಜೆಕ್ಷನ್ ನೀಡಲು ಅನುಮತಿ ನೀಡಲಾಗಿದೆ. ಈ ಹೊಸ ಲಸಿಕೆ 60ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೂ ನೀಡಲಾಗುವುದು
ಲಸಿಕೆಗೆ ಅನುಮೋದನೆ ನೀಡಿರುವ ಕುರಿತು ಫೈಜರ್ ಹಿರಿಯ ಉಪಾಧ್ಯಕ್ಷ ಅನ್ನಾಲೀಸಾ ಆಂಡರ್ಸನ್ ಮಾತನಾಡಿ, ನವಜಾತಶಿಶುಗಳು ಹುಟ್ಟಿದ ಆರು ತಿಂಗಳಲ್ಲಿ ಅತ್ಯಂತ ಜಾಗರೂಕವಾಗಿ ನೋಡಿಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ರಕ್ಷಣೆ ಮಾಡಲು ಒಂದು ಮೈಲಿಗಲ್ಲು ಆಗಿದ್ದು, ಈ ವೇಳೆ ಆರ್‌ಎಸ್‌ವಿ ವಿರುದ್ಧ ರಕ್ಷಿಸುವಲ್ಲಿ ಅಬ್ರಿಸ್ಟೊ ಪ್ರಮುಖವಾಗಿದೆ. ಇದು ಮಗುವನ್ನು ರಕ್ಷಿಸಲು ಗರ್ಭಿಣಿ ತಾಯಂದಿರಿಗೆ ನೀಡುವ ಮೊದಲ ಲಸಿಕೆ ಆಗಿದೆ ಎಂದಿದ್ದಾರೆ
ಈ ಮಾತ್ರೆಯನ್ನು ಗರ್ಭಿಣಿಯರಿಗೆ ನೀಡುವುದರಿಂದ ಪ್ರತಿ ವರ್ಷ ಆರ್‌ಎಸ್‌ವಿ ಕಾರಣದಿಂದಾಗಿ 16,000 ಮಂದಿ ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು 300,000 ಕ್ಕೂ ಹೆಚ್ಚು ವೈದ್ಯರ ಭೇಟಿಗಳನ್ನು ತಡೆಯಬಹುದು ಎಂದು ಫೈಜರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ ಬಳಿಕ ಟೆಲಿಹೆಲ್ತ್ ಮಾರುಕಟ್ಟೆ ಬೆಳವಣಿಗೆ: ಏನಿದು ಟೆಲಿಹೆಲ್ತ್ ವ್ಯವಸ್ಥೆ?