ಯಾದಗಿರಿ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಸಾರ್ವಜನಿಕ ಆಸ್ತಿ-ಪಾಸ್ತಿ ಸೇರಿದಂತೆ ಬೆಳೆ, ಮನೆ ಹಾಗೂ ಜೀವ ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ವಿತರಣಾ ಅನುದಾನದ ಬೇಡಿಕೆಯ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಬೆಳೆ, ಮನೆ ಹಾಗೂ ರಸ್ತೆ ಹಾನಿಯ ಕುರಿತು ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಯಾದಗಿರಿ ತಾಲೂಕಿನಲ್ಲಿ 2 ಎತ್ತುಗಳು, 11 ಮೇಕೆಗಳು ಸೇರಿ 13 ಪ್ರಾಣಿಗಳ ಹಾನಿ ಸಂಭವಿಸಿದೆ. ಶಹಾಪುರ ತಾಲೂಕಿನ ಒಟ್ಟು 71 ಮನೆಗಳಿಗೆ ನೀರು ನುಗ್ಗಿರುವ ಕಾರಣ ಸಂತ್ರಸ್ತರಿಗೆ ಬಟ್ಟೆ ಹಾಗೂ ಅಡುಗೆ ಪಾತ್ರೆಗಳ ಖರೀದಿಗೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತುರ್ತು ಪರಿಹಾರ ನೀಡಲಾಗಿದೆ ಎಂದು ತಹಸೀಲ್ದಾರರು ಮಾಹಿತಿ ನೀಡಿದರು.
ಮಳೆಯಿಂದಾಗಿ ಜಿಲ್ಲೆಯ ಸುರಪುರ ತಾಲೂಕಿನ 12 ಪಕ್ಕಾ ಮನೆಗಳು ಶೇ. 75ಕ್ಕಿಂತ ಹೆಚ್ಚು ಹಾನಿಗೊಂಡಿವೆ. ಯಾದಗಿರಿ 81, ಶಹಾಪುರ 696, ಸುರಪುರ 500, ಗುರುಮಠಕಲ್ 83, ವಡಗೇರಾ 236 ಹಾಗೂ ಹುಣಸಗಿ ತಾಲೂಕಿನ 775 ಸೇರಿ ಒಟ್ಟು 2,371 ಪಕ್ಕಾ ಹಾಗೂ ಕಚ್ಚಾ ಮನೆಗಳು ಶೇ. 15ರಿಂದ 25ರಷ್ಟು ಹಾನಿಯಾಗಿದ್ದು, ಎನ್ಡಿಆರ್ಎಫ್ ನಿಯಮಾವಳಿಯ ಪ್ರಕಾರ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದು ತಹಸೀಲ್ದಾರರು ಸಭೆಯಲ್ಲಿ ಮಾಹಿತಿ ನೀಡಿದರು.
ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಂಭವಿಸಿದ ಮನೆ ಹಾನಿಯ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪಕ್ಕಾ ಮಾಹಿತಿ ಇರುತ್ತದೆ. ಮನೆ ಹಾನಿಯ ಸಮೀಕ್ಷೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಭಾಗಶಃ ಹಾನಿಯ ಕುರಿತು ವರದಿ ಮಾಡಿ ದೃಢೀಕರಣ ನೀಡುವಂತೆ ಸೂಚಿಸಬೇಕು. ಮಳೆಯ ಹಾನಿಯ ಕುರಿತು ಎಂಜಿನಿಯರ್ಗಳಿಂದ ಹಾನಿಯ ಪ್ರಮಾಣದ ವರದಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಹೇಳಿದರು.
ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ 18,562 ಹೆಕ್ಟರ್ ಪ್ರದೇಶದಲ್ಲಿ ಮಳೆ ಹಾನಿಯಾಗಿದ್ದು, ಪ್ರದೇಶದಲ್ಲಿ ಶೇ. 33ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮಾಹಿತಿ ನಿಡಿದರು.
ಲೋಕೋಪಯೋಗಿ ಇಲಾಖೆಯ 56 ಕಾಮಗಾರಿಗಳಿಗೆ ಭಾರೀ ಮಳೆಯಿಂದಾಗಿ ಹಾನಿಯಾಗಿದೆ. ಇದರಿಂದ 38 ಕೋಟಿ ರೂ. ನಷ್ಟ ಸಂಭವಿಸಿದೆ. ಪ್ರಸ್ತುತ 6 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಕಾಮಗಾರಿಗಳ ಕ್ರಿಯಾ ಯೋಜನೆಯ ಅಂದಾಜು ಪಟ್ಟಿಯನ್ನು ಅತಿ ಶೀಘ್ರದಲ್ಲಿ ತಯಾರಿಸಬೇಕು ಎಂದು ಸಭೆಯಲ್ಲಿ ನಗರಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.