ಯಾದಗಿರಿ: ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿಭಟನೆ ಮಾಡುವುದು ಅವರ ಸಾಂವಿಧಾನಿಕ ಹಕ್ಕು. ರೈತರು ಸರ್ಕಾರ ಹೇಳಿದಂತೆ ಕೇಳದಿದ್ದರೆ ಕೋರ್ಟ್ಗೆ ಹೋಗುತ್ತೇವೆ ಎಂಬ ಮನೋಭಾವ ಕೇಂದ್ರ ಸರ್ಕಾರಕ್ಕಿದೆ. ರೈತರ ವಿಚಾರದಲ್ಲಿ ಸರ್ಕಾರ ಸಲ್ಲಿಸಿದ ಆಕ್ಷೇಪಣಾ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ ಛೀಮಾರಿ ಹಾಕಿದೆ. ರೈತರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡದ ಇವರು ಇನ್ಯಾರಿಗೆ ರಕ್ಷಣೆ ಕೊಡುತ್ತಾರೆ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಕಲಾಪದ ನಿಯಮಗಳ ಮೇಲೆ ನಂಬಿಕೆ ಇಲ್ಲ. ಸದನ ಆರಂಭವಾಗುವ ಮುನ್ನವೇ ಬಾಗಿಲು ಮುಚ್ಚಲಾಗಿತ್ತು. ಸಭಾಧ್ಯಕ್ಷರು ಇದ್ದಾಗ ಬೇರೆಯವರು ಆ ಪೀಠದ ಮೇಲೆ ಕೂರಲು ಸಾಧ್ಯವಿಲ್ಲ ಎಂದರು.
ಸಿ.ಎಂ.ಇಬ್ರಾಹಿಂ ಜಿಡಿಎಸ್ ಸೇರ್ಪಡೆ ಚಿಂತನೆ ವಿಚಾರವಾಗಿ ಮಾತನಾಡಿದ ಅವರು, ಒಬ್ಬರಿಂದ ಕಾಂಗ್ರೆಸ್ ಪಕ್ಷ ನಡೆದಿಲ್ಲ. ಯಾರೂ ಪಕ್ಷಕ್ಕೆ ಅನಿವಾರ್ಯವಲ್ಲ. ಜೊತೆಗೆ ಪ್ರಿಯಾಂಕ್ ಖರ್ಗೆನೂ ಅನಿವಾರ್ಯವಲ್ಲ. ನನ್ನಂತಹ 10 ಪ್ರಿಯಾಂಕ್ರನ್ನು ಕಾಂಗ್ರೆಸ್ ಸೃಷ್ಟಿ ಮಾಡುತ್ತದೆ ಎಂದು ಸಿ.ಎಂ.ಇಬ್ರಾಹಿಂ ವಿರುದ್ಧ ಚಾಟಿ ಬೀಸಿದರು.