ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯಿರುವ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2 ಲಕ್ಷದ 95 ಸಾವಿರ ಕ್ಯುಸೆಕ್ ನೀರು ಹರಿ ಬಿಡಲಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಈಗಾಗಲೇ ನದಿ ತೀರದ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ರೈತರು ಕಂಗಾಲಾಗಿದ್ದಾರೆ. ಒಟ್ಟು 33.313 ಟಿಎಂಸಿ ಸಾಮರ್ಥ್ಯ ಹೊಂದಿರುವ ಬಸವಸಾಗರ ಜಲಾಶದಲ್ಲೀಗ 24 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂನ ಒಳಹರಿವು ಕೂಡ 2 ಲಕ್ಷದ 70 ಸಾವಿರದಷ್ಟು ಹೆಚ್ಚಾಗಿದೆ. ಕೃಷ್ಣಾ ನದಿ ಪ್ರವಾಹ ಸಂಕಷ್ಟ ಒಂದೆಡೆಯಾದರೆ, ಭೀಮಾ ನದಿ ಕೂಡಾ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ಎರಡು ನದಿಗಳ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಹೆಚ್ಚಿಸಿದೆ.
ಪ್ರವಾಹ ಭೀತಿ ಹಿನ್ನೆಲೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ನದಿ ತೀರಕ್ಕೆ ಜನ ಮತ್ತು ಜಾನುವಾರುಗಳು ತೆರಳದಂತೆ ಸೂಚಿಸಿದೆ.