ಯಾದಗಿರಿ : ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಮೂಲಕ ದೇಶದ್ರೋಹಿ ಹೇಳಿಕೆ ನೀಡಿದ ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಮೂಲದ ದೇವೇಂದ್ರಪ್ಪ ಎಂಬುವರು ಛತ್ತೀಸ್ಗಢದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾರ್ಯಸ್ಥಾನದಿಂದಲೇ ಮೊಬೈಲ್ ವಿಡಿಯೋ ಮಾಡುವ ಮೂಲಕ ಅಮೂಲ್ಯ ವಿರುದ್ಧ ಹೋರಾಟ ಮಾಡುವಂತೆ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. ನಾವು ಗಡಿಯಲ್ಲಿ ನಿಂತು ಭಾರತಾಂಬೆಯ ಸೇವೆ ಮಾಡುತ್ತೇವೆ. ಆದರೆ, ದೇಶದ ಒಳಗಡೆ ಅಮೂಲ್ಯನಂತಹ ವಿಕೃತ ಮನಸ್ಸಿನವರು ಇದ್ದಾರೆ. ಅಮೂಲ್ಯ ಅಂಥವರು ಸ್ವಪ್ರತಿಷ್ಠೆಗೋಸ್ಕರ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಸರ್ಕಾರ ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಯೋಧ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಯೋಧ ದೇವೆಂದ್ರಪ್ಪ ಕಳೆದ 8 ವರ್ಷದಿಂದ ಸಿಆರ್ಪಿಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಾರ್ಯಸ್ಥಾನದಿಂದ ವಿಡಿಯೋ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.