ಸುರಪುರ: ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಆಶ್ರಯವಿಲ್ಲದೆ ಅಲೆಯುತ್ತಿರುವ ವಯೋವೃದ್ಧೆಯ ಸ್ಥಿತಿ ಚಿಂತಾಜನಕವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ವೃದ್ಧೆಯನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರದ ಬಸ್ ನಿಲ್ದಾಣ, ಸರ್ಕಾರಿ ಶಾಲೆ, ದೇವಸ್ಥಾನ ಹಾಗೂ ರಸ್ತೆ ಬದಿಯಲ್ಲಿ ವಾಸವಿರುವ ವೃದ್ಧೆ ಸರಿಯಾಗಿ ಮಾತೂ ಆಡದೆ ಮಾನಸಿಕ ಅಸ್ವಸ್ಥಳಂತೆ ಕಾಣುತ್ತಿದ್ದು, ಕೈ ಹಿಡಿದು ಪಾಲನೆ ಪೋಷಣೆ ಮಾಡಬೇಕಿದ್ದ ಕುಟುಂಬದವರು ಬೀದಿಗೆ ತಳ್ಳಿದ್ದು, ಸದ್ಯ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಜನರು ಕೊಡುವ ಆಹಾರ ತಿಂದು ತಿರುಗಾಡುವ ಮಹಿಳೆ ಈಗ ಸಂಪೂರ್ಣ ಕುಂದು ಹೋಗಿದ್ದಾಳೆ. ಸದ್ಯ ಸರ್ಕಾರಿ ನೌಕರರ ಭವನದಲ್ಲಿ ಊಟ, ನಿದ್ದೆ, ಸ್ನಾನವಿಲ್ಲದೆ ಮಲಗಿದಲ್ಲೆ ಮಲ ಮೂತ್ರವನ್ನು ವಿಸರ್ಜನೆ ಮಾಡಿಕೊಂಡು ಹೀನಾಯ ಸ್ಥಿತಿ ತಲುಪಿದ್ದಾಳೆ.
ಇಲ್ಲಿಯವರೆಗೆ ತಾಲೂಕು ಆಡಳಿತವಾಗಲಿ ನಗರಸಭೆಯಾಗಲಿ ಮಹಿಳೆಯನ್ನು ಗುರುತಿಸಿ ವೃದ್ಧಾಶ್ರಮ ಅಥವಾ ಅನಾಥಾಶ್ರಮಕ್ಕೂ ಸೇರಿಸುವ ಗೋಜಿಗೆ ಹೋಗಿಲ್ಲ. ಈಗಲಾದರೂ ಕರೆದೊಯ್ಯುವ ಕ್ರಮ ಕೈಗೊಳ್ಳಬೇಕೆಂದು ಜನರು ಮನವಿ ಮಾಡಿದ್ದಾರೆ.