ಸುರಪುರ: ಇಲ್ಲಿನ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಯಾನಿಟೈಸರ್ ಸಿಂಪಡಿಸಿ, ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಶಿಕೇಶ ಭಗವಾನ್ ಸೋನವಾಣೆ ಠಾಣೆಗೆ ಭೇಟಿ ನೀಡಿ, ಸಾರ್ವಜನಿಕರ ಮೇಲೆ ಲಾಠಿ ಬೀಸದೆ, ಮುಟ್ಟದೆ ಕರ್ತವ್ಯ ನಿರ್ವಹಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.
ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದರಿಂದ ಎಲ್ಲರೂ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದರು. ಮನೆಗಳಲ್ಲಿ ಚಿಕ್ಕ ಮಕ್ಕಳು ಇದ್ದರೆ ವರದಿ ಬರುವವರೆಗೂ ಮನೆಗೆ ಹೋಗದೆ ಪ್ರತ್ಯೇಕವಾಗಿರುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಪಿಐ ಸಾಹೇಬ್‌ಗೌಡ ಪಾಟೀಲ್ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿಯ ಗಂಟಲು ದ್ರವ ಸಂಗ್ರಹಿಸಲಾಯಿತು. ಜುಲೈ 3ರಂದು ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದ ಸಿಬ್ಬಂದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಈಗ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಿದ್ದಾರೆ.